ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜನತಾ ನ್ಯಾಯಾಲಯ ಶಿಕ್ಷೆ ನೀಡಲಿ: ಸಿದ್ದರಾಮಯ್ಯ

ದಾವಣಗೆರೆ.ಮಾ.14: ಲೋಕಾಯುಕ್ತರ ದಾಳಿ ವೇಳೆ ಕೋಟಿಗಟ್ಟಲೇ ಹಣ ಪತ್ತೆಯಾಗಿದ್ದು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಾರ್ವಜನಿಕ ಜೀವನದಲ್ಲಿ ಇರಬೇಕಾ ಅಥವಾ ಬೇಡವಾ ಎಂಬುದನ್ನು ಚನ್ನಗಿರಿ ಕ್ಷೇತ್ರದ ಮತದಾರರು ತೀರ್ಮಾನ ಮಾಡಬೇಕು. ಕೋಟಿಗಟ್ಟಲೇ ಲೂಟಿ ಹೊಡೆದವನು ಎಂಎಲ್ ಎ ಆಗಿರಬೇಕಾ ಚನ್ನಗಿರಿ ಕ್ಷೇತ್ರದ ಮತದಾರರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕೋರ್ಟ್ ಜಾಮೀನುಕೊಟ್ಟಿದೆ. ಜನತಾ ನ್ಯಾಯಾಲಯದಲ್ಲಿ ಇಂಥ ಭ್ರಷ್ಟ ಶಾಸಕನಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಚನ್ನಗಿರಿ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಡಾಳ್ ವಿರೂಪಾಕ್ಷಪ್ಪನ ಪುತ್ರ ಲೋಕಾಯುಕ್ತ ದಾಳಿ ವೇಳೆ ಸಿಕ್ಕಿ ಬಿದ್ದಾಗ ಕೋಟ್ಯಂತರ ಹಣ ಪತ್ತೆಯಾಗಿದೆ. ಸರ್ಕಾರಿ ಕೆಲಸ ಮಾಡುವ ನೌಕರ ಮನೆಯಲ್ಲಿ 6 ಕೋಟಿ 10 ಲಕ್ಷ ರೂಪಾಯಿ ಸಿಕ್ಕಿದೆ.  ಅಪ್ಪ ಹೇಳಿದ್ದಾನೆ, ಮಗ ತೆಗೆದುಕೊಂಡಿದ್ದಾನೆ. ಬೇರೆ ಯಾರಾದರೂ ಆಗಿದ್ದರೆ ಮನೆ ಬಿಟ್ಟು ಹೊರಬರುತ್ತಿರಲಿಲ್ಲ. ಭ್ರಷ್ಟಾಚಾರ ಆರೋಪ ಹೊತ್ತು ಜಾಮೀನು ಪಡೆದು ಮೆರವಣಿಗೆ ನಡೆಸಿದ ವಿರೂಪಾಕ್ಷಪ್ಪನಿಗೆ ಮಾನ ಮರ್ಯಾದೆ ಇಲ್ಲ. ಮಾಡಾಳ್ ನಂಥ ರಾಕ್ಷಸನನ್ನು ಮನೆಗೆ ಕಳುಹಿಸಿ ಎಂದು ಗುಡುಗಿದರು.ಮಾಡಾಳು ವಿರೂಪಾಕ್ಷಪ್ಪನನ್ನು ರಕ್ಷಣೆ ಮಾಡಿದ್ದೇ ಬಸವರಾಜ್ ಬೊಮ್ಮಾಯಿ. ತಲೆಮರೆಸಿಕೊಂಡಿಲ್ಲ, ಮನೆಯಲ್ಲೇ ಇದ್ದೆ ಎಂದು ವಿರೂಪಾಕ್ಷಪ್ಪನೇ ಹೇಳಿದ್ದು, ಹಾಗಿದ್ದರೆ ಪೊಲೀಸರು ಹೇಳಿದ್ದು ಸತ್ಯನಾ, ಮಾಡಾಳ್ ಹೇಳಿದ್ದು ನಿಜನಾ. ಬೊಮ್ಮಾಯಿ ಹೇಳಿದಂತೆ ಪೊಲೀಸರು ಕೇಳಿದ್ದಾರೆ. ರೆಡ್ ಹ್ಯಾಂಡ್ ಆಗಿ ಹಣ ಸಿಕ್ಕಾಗ ಚನ್ನಗಿರಿಯ ಮಾಡಾಳ್ ಮನೆಯ ಮೇಲೆ ದಾಳಿಯೂ ಮಾಡಬೇಕಿತ್ತು. ಕೂಡಲೇ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.ಚನ್ನಗಿರಿಯಲ್ಲಿ 6150 ಮನೆಗಳನ್ನು ವಡ್ನಾಳ್ ರಾಜಣ್ಣ ಶಾಸಕರಾಗಿದ್ದಾಗ ನೀಡಿದ್ದೇವೆ. 2500 ಕೋಟಿ ರೂಪಾಯಿ ನಾನು ಅನುದಾನ ನೀಡಿದ್ದೆ. ಮಾಡಾಳ್ ವಿರೂಪಾಕ್ಷಪ್ಪ ಎಷ್ಟು ಮನೆ ಕೊಟ್ಟಿದ್ದಾನೆ.  ಗ್ರಾಮ ಪಂಚಾಯಿತಿ ಸದಸ್ಯರು ಇದನ್ನು ಹೇಳಬೇಕು. ಹೊಸದಾಗಿ ಒಂದೇ ಒಂದು ಮನೆಯನ್ನೂ ನೀಡಿಲ್ಲ. ಇವ್ನ ಮನೆ ಹಾಳಾಗ. ಇಂಥವರು ಅಧಿಕಾರದಲ್ಲಿ ಇರಬೇಕೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಭ್ರಷ್ಟನನ್ನು ಆಯ್ಕೆ ಮಾಡಿ ತಪ್ಪು ಮಾಡಿಬಿಟ್ಟೀರಾ. ಈ ಕ್ಷೇತ್ರದ ಜನರ ಮನೆ ಮನೆಗೆ ತೆರಳಿ ಈ ವಿಷಯ ತಿಳಿಸಿ. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಿ. ಪ್ರಾಮಾಣಿಕ ವ್ಯಕ್ತಿ ವಡ್ನಾಳ್ ರಾಜಣ್ಣರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.