ಶಾಸಕ ಮತ್ತಿಮೂಡ ಮೇಲೆ ಇಲ್ಲ ಸಲ್ಲದ ಆರೋಪ: ಮಾಲೀಕಯ್ಯ ಗುತ್ತೇದಾರ

ಅಫಜಲಪುರ,ನ.17-ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮತ್ತು ಅವರ ಪತ್ನಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬಸವರಾಜ ಮತ್ತಿಮೂಡ ಅವರಿಗೆ ವಿನಾಕಾರಣ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದರು.
ಮತ್ತಿಮೂಡ ಅವರು ಈ ಹಿಂದೆ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಈಗ ಶಾಸಕರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಏಳಿಗೆಯನ್ನು ಸಹಿಸದೆ ಅವರ ಮೇಲೆ ವಿನಾಕಾರಣ ಆರೋಪ ಹೊರಿಸಿ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದರು.
ಮತ್ತಿಮೂಡ ಅವರ ಮೇಲೆ ಹೊರಿಸಲಾಗಿರುವ ಆರೋಪದ ಹಿಂದೆ ಶಾಸಕ ಪ್ರಿಯಾಂಕ್ ಖರ್ಗೆ ಅವರ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ ಮಾಲೀಕಯ್ಯ ಗುತ್ತೇದಾರ ಅವರು, ಶಾಸಕ ಪ್ರಿಯಾಂಕ್ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗ ಜ್ಞಾನೋದಯವಾಗಿದೆ. ಸಮಾನತೆ ಇಲ್ಲದಿದ್ದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ನನ್ನನ್ನು, ಬಾಬುರಾವ ಚಿಂಚನಸೂರ್ ಮತ್ತು ಡಾ.ಉಮೇಶ್ ಜಾಧವ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದರೆ, ಖರ್ಗೆಯವರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಲಬುರಗಿಯ ಚಿತ್ರಣವೇ ಬೇರೆಯಾಗುತ್ತಿತ್ತು. ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ಎಚ್ಚೆತ್ತುಕೊಂಡು ತಮ್ಮ ಕೆಲಸ ಮತ್ತು ತಮ್ಮ ಕ್ಷೇತ್ರದ ಕೆಲಸ ನೋಡಿಕೊಳ್ಳಲಿ. ನಮ್ಮ ಕುಟುಂಬದವಱ್ಯಾರು ಮರಳು ಮಾಫಿಯಾದಲ್ಲಿ ತೊಡಗಿಲ್ಲ. ಯಾರಿಂದಲೂ ದುಡ್ಡು ಕೇಳಿಲ್ಲ. ನಾವು ನಮ್ಮ ಮನೆಯಿಂದ ಹಣ ಖರ್ಚು ಮಾಡ ರಾಜಕೀಯ ಮಾಡುತ್ತಿದ್ದೇವೆ ಎಂದರು.
ಮಹಾರಾಷ್ಟ್ರ ಸರ್ಕಾರ ಸುಖಾಸುಮ್ಮನೆ ಶಾಸಕ ಮತ್ತಿಮೂಡ ಮೇಲೆ ಯಾರದೋ ಒತ್ತಡಕ್ಕೆ ಮಣಿದು ಕ್ರಿಮಿನಲ್ ಕೇಸ್ ದಾಖಲಿಸಲು ಪ್ರಯತ್ನ ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಕೊನೆಯಲ್ಲಿ ಸಂತ ಶಿಶುನಾಳ ಶರೀಫ್ ಅವರ ” ಒಳಿತು ಮಾಡು ಮನುಜ ನೀ ಇರೋದು ಮೂರು ದಿವಸ” ಎಂಬ ಪದ ಹೇಳಿ ಪತ್ರಿಕಾಗೋಷ್ಠಿ ಮುಗಿಸಿದರು.