ಶಾಸಕ ಮಂಜುನಾಥ್ ನಡೆಗೆ ತಿಗಳ ಮುಖಂಡರ ಆಕ್ರೋಶ

ಕೋಲಾರ,ಸೆ,೧೨-ಕಾಂಗ್ರೆಸ್ ಮುಖಂಡ ಹಾಗೂ ಪಕ್ಷದ ವಕ್ತಾರರಾಗಿದ್ದ ತಿಗಳ ಸಮುದಾಯದ ಎಲ್.ಎ.ಮಂಜುನಾಥ್ ಪರ ಬ್ಯಾಟಿಂಗ್ ಮಾಡಿದ ವಹ್ನಿಕುಲದ ಮುಖಂಡರು ಹಾಲಿ ಶಾಸಕ ಕೊತ್ತೂರು ಮಂಜುನಾಥ್ ಅವರ ನಡೆಯನ್ನು ಖಂಡಿಸಿದರಲ್ಲದೆ ಅನಿವಾರ್ಯವಾದರೆ ಶಾಸಕರ ವಿರುದ್ದ ಹೋರಾಟ ರೂಪಿಸುವುದಾಗಿ ವಹ್ನಿಕುಲದ ಮುಖಂಡರು ಎಚ್ಚರಿಕೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಲ್.ಎ.ಮಂಜುನಾಥ್ ಅವರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನವನ್ನು ಶಾಸಕ ಕೊತ್ತೂರು ಮಂಜುನಾಥ್‌ರ ಮಾತಿಗೆ ಕಟ್ಟು ಬಿದ್ದು, ಸರ್ಕಾರ ಹಿಂಪಡೆದಿರುವುದು ಸಮಂಜಸವಲ್ಲ, ತಳ ಸಮುದಾಯದ ವ್ಯಕ್ತಿಯನ್ನು ತುಳಿಯಲು ಹೊರಟಿರುವ ಕೊತ್ತೂರು ಮಂಜುನಾಥ್ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಗಳ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು.
ಮುಳಬಾಗಿಲು ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಗೆಲ್ಲಲು ವಹ್ನಿ ಕುಲಸ್ಥರ ಬೆಂಬಲದಿಂದಲೇ ಶಾಸಕರಾಗಿದ್ದು. ಆದರೆ ಅದನ್ನು ಮರೆತಿರುವ ಶಾಸಕರು ತಿಗಳ ಸಮುದಾಯದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಲ್.ಎ.ಮಂಜುನಾಥ್‌ರಿಗೆ ಸಿಕ್ಕಿದ್ದ ಕನಿಷ್ಟ ಸಣ್ಣ ಅಧಿಕಾರವನ್ನು ಸಹಿಸದೆ, ಯಾರದೋ ಮಾತಿಗೆ ಕಟ್ಟಿ ಬಿದ್ದು, ವಾಪಸು ಪಡೆಯು ಕೆಲಸ ಮಾಡಿರುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ೪೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಉಳ್ಳ ಸಮುದಾಯವೂ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಲು ದೊಡ್ಡ ಕೊಡುಗೆ ನೀಡಿದೆ. ಆದರೆ ಸಮುದಾಯದವರಿಗೆ ಸೂಕ್ತವಾದ ಸ್ಥಾನಮಾನ ಕಲ್ಪಿಸದೆ ಇರುವುದನ್ನು ಕಸಿಯಲು ಮುಂದಾಗಿರುವುದ ವಿಪರ್ಯಾಸವಾಗಿದೆ. ಕಾಂಗ್ರೇಸ್ ಪಕ್ಷದ ಹೈಕಮಾಂಡ್ ಹೇಗೋ ಒಂದೊಂದು ಸ್ಥಾನವನ್ನು ಕಲ್ಪಿಸಿದ್ದರೂ, ಅದನ್ನು ವಂಚಿಸಿ ಕಾಲೆಳೆಯುವ ಕೆಲಸ ಮಾಡುತ್ತಿರುವುದು ನಮಗೆಲ್ಲ ಬೇಸರ ತಂದಿದೆ ಎಂದು ತಿಳಿಸಿದರು.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಎಲ್.ಎ.ಮಂಜುನಾಥ್, ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂದು ಹಿಂದೆ ಸರಿದರು. ಅರ್ಜಿ ಸಲ್ಲಿಸದ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಯಿತು. ನಮಗೇನು ಬೇಸರವಾಗಿಲ್ಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನವನ್ನು ಕಿತ್ತುಕೊಂಡಿರುವುದು ಸರಿಯಲ್ಲವೆಂದು ದೂರಿದರು.
ಮಾಲೂರು ತಾಲ್ಲೂಕಿನ ಮತದಾರರಾಗಿರುವ ಎಲ್.ಎ. ಮಂಜುನಾಥ್ ಅವರ ಕುಟುಂಬದವರು ಮೂಲತಃ ಕಾಂಗ್ರೆಸ್ ಪಕ್ಷದವರು,ಸತತ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪರ ದುಡಿಯುತ್ತಿದ್ದು, ಪ್ರಸ್ತುತ ಈಗಲೂ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದು ಅಧಿಕಾರದಲ್ಲಿದ್ದಾರೆ.ಮಾಲೂರು ಶಾಸಕರಾದ ನಂಜೇಗೌಡರ ಶಿಫಾರಸ್ಸಿನ ಮೇಲೆ ಎಲ್.ಎ.ಮಂಜುನಾಥ್ ರವರನ್ನು ಡಿ.ಸಿ.ಸಿ.ಬ್ಯಾಂಕ್ ನಾಮ ನಿರ್ದೇಶಕರನ್ನಾಗಿ ಮಾಡಲಾಗಿತ್ತು,
ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠರು ಶಾಸಕರ ಬೆಂಬಲಿಗರಿಗೆ ಅವಕಾಶ ಮಾಡಲು ಎಲ್.ಎ.ಮಂಜುನಾಥ್ ರವರ ಸ್ಥಾನಮಾನವನ್ನು ರದ್ದು ಮಾಡಿರುವುದು ತಿಗಳ ಸಮುದಾಯವನ್ನು ಅವಮಾನ ಮಾಡಿದಂತೆ ಎಂದು ದೂರಿದರು.ಈ ವಿಷಯವಾಗಿ ಹಾಲಿ ಶಾಸಕರನ್ನು,ಮುಖ್ಯ ಮಂತ್ರಿಗಳನ್ನು ಹಾಗೂ ಪಕ್ಷದ ರಾಜ್ಯ ಅಧ್ಯಕ್ಷರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗುವುದು ನಮಗೆ ನ್ಯಾಯ ದೊರೆಯದ್ದಿದ್ದರೆ ಹೋರಾಟ ಮಾಡಲು ಹಿಂದಕ್ಕೆ ಹೋಗುವುದಿಲ್ಲವೆಂದರು.