ಶಾಸಕ ಭೀಮಾ ನಾಯ್ಕ್ ಭ್ರಷ್ಟಾಚಾರ ತನಿಖೆಗೆ ಬಂಡಾಯ ಕಾಂಗ್ರೆಸ್  ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.28: ಇತ್ತೀಚಿಗೆ ಶಾಸಕರ ಲಂಚ ಪ್ರಕರಣ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಕಾಂಗ್ರೆಸ್ಸಿನ ಒಂದು ಗುಂಪು ಬೀದಿಗಿಳಿದು ಶಾಸಕರ ವಿರುದ್ಧ ಪ್ರತಿಭಟಿಸಿ ತನಿಖೆ ನಡೆಸುವಂತೆ ತಹಸೀಲ್ದಾರ್ ಮೂಲಕ ಸೋಮವಾರ ಮನವಿ ಸಲ್ಲಿಸಿದರು.
 ಪಟ್ಟಣದ ಈಶ್ವರ ದೇಗುಲದಿಂದ ಆರಂಭವಾಗಿ ಹಲಿಗೆ ಬಡಿಯುತ್ತಾ ಪ್ರಮುಖ ರಸ್ತೆಯ ಮೂಲಕ ಶಾಸಕರ ವಿರುದ್ಧ ದಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸಲಾಯಿತು.
 ಪ್ರತಿಭಟನೆಯ ನೇತೃವಹಿಸಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟಗನಹಳ್ಳಿ  ಕೊಟ್ರೇಶ್ ಮಾತನಾಡಿ ಓ ಎಫ್ ಸಿ ಕೇಬಲ್ ಅಳವಡಿಕೆ ವಿಚಾರದಲ್ಲಿ ಶಾಸಕರು ಲಂಚ ತೆಗೆದುಕೊಳ್ಳುವ ವಿಡಿಯೋ ಟಿವಿಯಲ್ಲಿ ಬಹಿರಂಗವಾಗುತ್ತಿದ್ದಂತೆ ಅದನ್ನು ಸಮರ್ಥನೆ ಮಾಡಿಕೊಳ್ಳುವ ಶಾಸಕರು ಕೊಟ್ಟೂರೇಶ್ವರನ ಮೇಲೆ ಆಣೆ ಮಾಡಿ ಲಂಚ ತೆಗೆದುಕೊಂಡಿಲ್ಲ ಅಂತ ಹೇಳಲಿ , ಕಣ್ಣಿಗೆ ಕಾಣುತ್ತಿರುವುದು ಇದು ಒಂದೇ ಆದರೆ ಕಣ್ಣಿಗೆ ಕಾಣದೆ ಇನ್ನು ಎಷ್ಟು ಇಂಥ ಲಂಚ ಪ್ರಕರಣಗಳು ನಡೆದಿರಬಹುದು ಎಂಬುವುದು ಇವರ ಅಕ್ರಮ ಆಸ್ತಿ ತನಿಖೆ ಮಾಡಿದರೆ ಗೊತ್ತಾಗುತ್ತದೆ. ಇವರಿಗೆ ಯಾರ ಭಯವೂ ಇಲ್ಲ ರಾಜ್ಯದ 224 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ  ಶಾಸಕ ಯಾರು ಅಂದರೆ ಅದು ಭೀಮನಾಯ್ಕ್, ಇಂತಹ ಶಾಸಕ ಕ್ಷೇತ್ರದಲ್ಲಿರುವುದೇ ದುರಂತ ಮತದಾರರನ್ನು ತಲೆತಗ್ಗಿಸುವಂತೆ ಮಾಡಿದ್ದಾರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ವರಿಷ್ಠರು ಈತನಿಗೆ ಬಿ ಫಾರಂ ಕೊಡಬಾರದು ಕೊಟ್ಟರೆ ಸೋಲುವುದು ಗ್ಯಾರಂಟಿ ಎಂದು ಕಿಡಿಕಾರಿದರು.
ತಾ ಪಂ ಮಾಜಿ ಸದಸ್ಯ ಬುಡ್ಡಿ ಬಸವರಾಜ್ ಮಾತನಾಡಿ ಶಾಸಕ 10 ವರ್ಷದ ಅವಧಿಯಲ್ಲಿ ಎಷ್ಟು ಆಕ್ರಮ ಆಸ್ತಿ ಮಾಡಿದ್ದಾರೆ ಎಂಬುವುದು ತನಿಖೆ ಮಾಡಿದರೆ ಗೊತ್ತಾಗುತ್ತೆ ಇವರು  ಎಷ್ಟು ಬ್ರಷ್ಟಾಚಾರ ಮಾಡಿದ್ದಾರೆ ಎಂಬುದು  ಈಗಾಗಲೇ ಇವರ ಬಂಡವಾಳ ಮತದಾರರಿಗೆ ಗೊತ್ತಾಗಿದೆ ಬರುವ ಚುನಾವಣೆಯಲ್ಲಿ ಮನೆಗೆ ಕಳಿಸಲು ಸಜ್ಜಾಗಿದ್ದಾರೆ ಎಂದರು.
 ವಿಎಸ್ಎಸ್ ಎನ್ ಅಧ್ಯಕ್ಷ ಕನ್ನಳ್ಳಿ ಚಂದ್ರು ಮಾತನಾಡಿ ಪ್ರತಿ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಹಣ ಸಂಪಾದಿಸಿರುವ ಭೀಮ ನಾಯಕ್ ಭ್ರಷ್ಟಾಚಾರದಿಂದ ಸಾಕಷ್ಟು ಆಸ್ತಿ ಮಾಡಿದ್ದಾರೆ. ಇವರು ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬಂದಿದ್ದಾರೆ ಇಂಥವರಿಗೆ ಈ ಬಾರಿ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಸೋಲುವುದು  ಗ್ಯಾರಂಟಿ  ಇದನ್ನು ಮತದಾರರೇ ಈಗ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಮತ್ತೊಬ್ಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೆಚ್ಎ ಕೊಟ್ರೇಶ್, ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಿ ಬಸವರಾಜ್ ಮಾತನಾಡಿದರು.
 ಈ ಸಂದರ್ಭದಲ್ಲಿತಾ ಪಂ ಮಾಜಿ ಸದಸ್ಯ ಜಾಣ ಅನಿಲ್ ಕುಮಾರ್, ಪ್ರಭಾಕರ್, ಸೋಗಿ,ಕೊಟ್ರೇಶ್ ಪಂಪಾಪತಿ, ನಾಗರಾಜ್, ಮಲ್ಲಿಕಾರ್ಜುನ, ಬರ್ಮಜ್ಜ, ಪರಶುರಾಮ್, ಜೆ. ಭೀಮಪ್ಪ, ಕೆ. ಮಹೇಶ, ಎಮ್ ಮಂಜುನಾಥ ರಾಜ ದೊಡ್ಡಬಸಪ್ಪ ಮರಿಯಪ್ಪ ಬೀರಪ್ಪ ಹುಲುಗಪ್ಪ ಮಧುಸೂದನ್ ಇತರರಿದ್ದರು.