ಶಾಸಕ ಭರತ್ ಕಚೇರಿ ಮೇಲೆ ಇಡಿ ದಾಳಿ ಅಂತ್ಯ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಫೆ. ೧೨ – ನಗರ ಶಾಸಕ ನಾರಾ ಭರತ್ ರೆಡ್ಡಿ ಮತ್ತವರ ಸಂಬಂಧಿಕರು, ಆಪ್ತರ ಮನೆ ಮತ್ತು ಕಚೇರಿ ಮೇಲೆ ಇಡಿ ಅಧಿಕಾರಿಗಳು ನಡೆಸಿದ್ದ ಎರಡು ದಿನಗಳ ದಾಳಿ ಅಂತ್ಯಗೊಳಿಸಿದೆ.ಮೊನ್ನೆ ಬೆಂಗಳೂರಿನಿಂದ ಬಂದ ೨೦ ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ. ಭರತ್ ರೆಡ್ಡಿ, ಅವರ ಚಿಕ್ಕಪ್ಪ, ಪ್ರತಾಪ್ ರೆಡ್ಡಿ ಮತ್ತವರ ಆಪ್ತರ ಮನೆ ಹಾಗು ಕಚೇರಿಗಳ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.ನಿನ್ನೆ ಫೆ ೧೦ ತಡ ರಾತ್ರಿವರೆಗೆ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಹಾರ್ಡ್ ಡಿಸ್ಕ್, ದಾಖಲೆ ಪತ್ರಗಳಿಗೆ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಮೊದಲಾದವರಿಂದ ಸಹಿ ಪಡೆದು ನಾಲ್ಕು ಬ್ಯಾಗ್ ಗಳಲ್ಲಿ ತೆಗೆದು ಕೊಂಡು ಇಡಿ ಅಧಿಕಾರಿಗಳ ತಂಡ ತೆರಳಿದೆ.ಇದು ಬಹುತೇಕ ರಾಘವೇಂದ್ರ ಎಂಟರ್ಪ್ರೈಸಸ್ ಗೆ ಸಂಬಂಧಿಸಿದ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ದಾಳಿ ಎಂದು ಹೇಳಲಾಗುತ್ತಿದೆ.

ಇಡಿ ಅವರು ಬಳ್ಳಾರಿಯಲ್ಲಿ ನಡೆಸಿದ ಎರಡನೇ ದಾಳಿ ಇದಾಗಿದೆ.ಈ ಮೊದಲು ಅಕ್ರಮ ಗಣಿಗಾರಿಕೆ, ಸಾಗಾಣಿಕೆ, ಅಕ್ರಮ ಹಣ ವರ್ಗಾವಣೆ ವಿಷಯದಲ್ಲಿ ಸಿಬಿಐ, ಐಟಿ ದಾಳಿ ನಂತರ ಇಡಿಯವರ ದಾಳಿ ಓಎಂಸಿ ಕಂಪನಿ ಕಚೇರಿ ಮೇಲೆ ನಡೆದಿತ್ತು.