ಶಾಸಕ ಪ್ರಭು ಚವ್ಹಾಣರಿಂದ 5 ಆಂಬ್ಯುಲೆನ್ಸ್ ಲೋಕಾರ್ಪಣೆ

ಬೀದರ:ಜೂ.13:ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಐದು ಹೊಸ ಸುಸಜ್ಜಿತ ಆಂಬ್ಯುಲೆನ್ಸ ಗಳನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಔರಾದ(ಬಿ) ಕ್ಷೇತ್ರದ ದಾಬಕಾ, ಕಮಲನಗರ, ಠಾಣಾ ಕುಶನೂರ, ಹೆಡಗಾಪೂರ ಹಾಗೂ ಔರಾದ ಆರೋಗ್ಯ ಕೇಂದ್ರಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 90 ಲಕ್ಷ ಅನುದಾನದಲ್ಲಿ ಹೊಸ ಆಂಬ್ಯುಲೆನ್ಸ್ ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಕ್ಷೇತ್ರದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆಗಳಲ್ಲಿ ಪ್ರಮುಖವಾಗಿದೆ. ಈ ದಿಶೆಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇಲಾಖೆಯ ಎಲ್ಲ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕ್ಷೇತ್ರದ ಎಲ್ಲ ಕಡೆಗಳಲ್ಲಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಹಲವೆಡೆ ಆಂಬ್ಯುಲೆನ್ಸ್ ಗಳು ಕೆಲಸ ಮಾಡುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ಹೊಸ ಆಂಬ್ಯುಲೆನ್ಸ್ ವಾಹನಗಳನ್ನು ಖರೀದಿಸಲಾಗಿದೆ ಎಂದರು.

ತುರ್ತು ಸಂದರ್ಭದಲ್ಲಿ ಕ್ಷೇತ್ರದ ಜನತೆ ಸುಲಭವಾಗಿ ಆಸ್ಪತ್ರೆಗೆ ತಲುಪಿ ಸಕಾಲಕ್ಕೆ ಚಿಕಿತ್ಸೆ ಪಡೆಯಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಹೊಸ ಆಂಬ್ಯುಲೆನ್ಸ್ ಗಳನ್ನು ಬಿಡುಗಡೆ ಮಾಡಿದ್ದೇನೆ. ರೋಗಿಗಳು ಆರೋಗ್ಯ ಸಹಾಯವಾಣಿಗೆ ಕರೆ ಮಾಡಿದ ತಕ್ಷಣ ಆಂಬ್ಯುಲೆನ್ಸ್ ವಾಹನ ಮನೆಗೆ ಬಂದು ರೋಗಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಸಿಗುವಂತೆ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕೋರಿದರು.

ವೈದ್ಯಾಧಿಕಾರಿಗಳು ಆಂಬ್ಯುಲೆನ್ಸ್ ಗಳು ಸರಿಯಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಜನತೆ ಆಂಬ್ಯುಲೆನ್ಸ್ ಗಳಿಗೆ ಕರೆ ಮಾಡುತ್ತಾರೆ. ತ್ವರಿತವಾಗಿ ವಾಹನ ಸ್ಥಳಕ್ಕೆ ತಲುಪಿದಾಗ ಮಾತ್ರ ರೋಗಿಯ ಪ್ರಾಣ ಉಳಿಯಲು ಸಾಧ್ಯ. ಹಾಗಾಗಿ ಆಂಬ್ಯುಲೆನ್ಸ್ ಗಳು ಸಮರ್ಪಕ ಸೇವೆ ಒದಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಂಬ್ಯುಲೆನ್ಸ್ ವಾಹನ ಚಾಲಕರು ಕರ್ತವ್ಯ ಲೋಪ ಎಸಗಿರುವ ಘಟನೆಗಳು ಕೆಲವೆಡೆ ನಡೆದಿವೆ. ಅದಕ್ಕೆ ಆಸ್ಪದ ಕೊಡಬಾರದು. ಯಾವುದೇ ರೀತಿಯ ದುಷ್ಚಟಗಳಿಲ್ಲದವರಿಗೆ ಜವಾಬ್ದಾರಿ ವಹಿಸಬೇಕು. ವೈದ್ಯರು ಕೂಡ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಟ್ಟು ಜೀವ ಉಳಿಸಬೇಕು. ಎಲ್ಲರೂ ಸಮಯ ಪಾಲನೆ ಮಾಡಬೇಕು. ಆಸ್ಪತ್ರೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆ ಪರಿಶೀಲನೆ: ಇದೇ ವೇಳೆ ಶಾಸಕರು ಆಸ್ಪತ್ರೆಯ ವಿವಿಧ ವಾರ್ಡ್ ಗಳಲ್ಲಿ ಸುತ್ತಾಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿಯಾಗಿ ವೈದ್ಯರು ಹೇಗೆ ಕೆಲಸ ಮಾಡುತ್ತಿದ್ದಾರೆ ?, ಚಿಕಿತ್ಸೆ ಸರಿಯಾಗಿ ನೀಡುತ್ತಿದ್ದಾರೆಯೇ ? ಎಂದು ಪ್ರಶ್ನಿಸುವ ಮುಲಕ ವೈದ್ಯರು ಮತ್ತು ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು.

ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿ ಆತ್ಮೀಯತೆಯಿಂದ ವ್ಯವಹರಿಸಬೇಕು. ವೈದ್ಯರು ಸರಿಯಾಗಿ ಮಾತನಾಡಿಸಿ ಧೈರ್ಯ ತುಂಬಿದಲ್ಲಿ ತುಂಬಾ ಆತಂಕದಲ್ಲಿರುವ ರೋಗಿಗಳ ಅರ್ಧ ಸಮಸ್ಯೆ ನಿವಾರಣೆಯಾಗುತ್ತದೆ. ಆಸ್ಪತ್ರೆಯಲ್ಲಿ ಕೆಲಸ ಸರಿಯಾಗಿ ಆಗುತ್ತಿದೆ. ಆದರೆ ಪ್ರೀತಿ ಕಡಿಮೆಯಾಗುತ್ತಿದೆ ಎಂದೆನಿಸುತ್ತಿದೆ. ಹಾಗಾಗಿ ಕೆಲಸದ ಜೊತೆಗೆ ರೋಗಿಗಳನ್ನು ಪ್ರೀತಿಯಿಂದ ಚಿಕಿತ್ಸೆ ನೀಡಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ರಮಣ್ ಪೆÇೀಕಲವಾರ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ದೊಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ, ಸಂತೋಷ ಪೆÇೀಕಲವಾರ, ಕೇರಬಾ ಪವಾರ, ಪ್ರತೀಕ್ ಚವ್ಹಾಣ, ಸಚಿನ ರಾಠೋಡ್ ಹಾಗೂ ಇತರರಿದ್ದರು.