
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.15: ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಶನಿವಾರ ಸಂಜೆ ನಗರದಲ್ಲಿ ಱ್ಯಾಲಿ ಮೂಲಕ ಆಗಮಿಸುತ್ತಿದ್ದ ಶಾಸಕ ಬಿ.ನಾಗೇಂದ್ರ ಅವರ ಮೇಲೆ ನಾಲ್ಕು ಜನರು ಜೀವ ಬೆದರಿಕೆ ಹಾಕಲು ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಗೇಂದ್ರ ಅವರು ಮತ ಏಣಿಕೆ ಕೇಂದ್ರದಿಂದ ನಗರದಲ್ಲಿ ಮೆರವಣಿಗೆ ಮೂಲಕ ಬರುವ ಸಂದರ್ಭದಲ್ಲಿ ಸಿರುಗುಪ್ಪ ರಸ್ತೆಯ ಹಳೇ ರಿಮ್ಯಾಂಡ್ ಹೋಂ ಬಳಿ ನಗರದ ನಿವಾಸಿಗಳಾದ ರಮೇಶ್ ಮತ್ತು ವೆಂಕಟೇಶ್ ಸೇರಿದಂತೆ ನಾಲ್ವರು ನಾಗೇಂದ್ರ ಅವರನ್ನು ಮಾತನಾಡಿಸುವ ನೆಪದಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದಾರೆ.
ಅವರನ್ನು ಮಾತನಾಡಿಸಲು ವಾಹನದಿಂದ ಕೆಳಗಿಳಿದಾಗ ಅವರು ಬೆದರಿಕೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಅವರ ಬಳಿ ಮಾರಕಾಸ್ತ್ರಗಳು ಇರುವುದನ್ನು ಕಂಡ ಶಾಸಕರ ಭದ್ರತಾ ಸಿಬ್ಬಂದಿ ಕೂಡಲೇ ಇಬ್ಬರನ್ನು ಹಿಡಿದು ಥಳಿಸಿದ್ದಾರೆ.
ಅಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿ ಅವರನ್ನು ಕೌಲ್ ಬಜಾರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳ ಬೈಕ್ ಜಖಂ ಆಗಿದೆ.
ಆರೋಪಿಗಳ ವಿರುದ್ಧ ಐಪಿಸಿ 504 ಮತ್ತು 506 ಸೆಕ್ಷನ್ ಅಡಿ ಜೀವ ಬೆದರಿಕೆ ಪ್ರಕರಣವನ್ನು ಕೌಲ್ ಬಜಾರ್ ಪೊಲೀಸರು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ. ಘಟನೆಯ ಕುರಿತಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.