ಶಾಸಕ ದರ್ಶನಾಪುರಗೆ ಸಚಿವ ಸ್ಥಾನ ನೀಡಿ: ಧರ್ಮಿಭಾಯಿ ರಾಠೋಡ

ಶಹಾಪೂರ:ಮೇ.24:ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲು ನಿರ್ಧರಿಸಲಾದ ನಾಲೈದು ಸಚಿವ ಸ್ಥಾನಗಳಲ್ಲಿ ಶಹಾಪುರಿನ ಶಾಸಕ ಶರಣಬಸಪ್ಪಗೌಡ | ದರ್ಶನಾಪುರ ಅವರನ್ನು ಪ್ರಥಮ ಆದ್ಯತೆ ಮೇಲೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಧರ್ಮಿಬಾಯಿ ರಾಠೋಡ ಹೆಗ್ಗನದೊಡ್ಡಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಾದೇಶಿಕ ಪ್ರಾತಿನಿಧ್ಯ, ಪಕ್ಷ ನಿಷ್ಠೆ, ಸೇವಾ ಹಿರಿತನ, ಅನುಭವ ಆಧರಿಸಿ ಶರಣಬಸಪ್ಪಗೌಡಗೆ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಬೇಕು. ಕ್ರೀಯಾಶೀಲವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಅವರೊಬ್ಬ ಪ್ರಾಮಾಣಿಕ
ರಾಜಕಾರಣಿ, ಮುತ್ಸದ್ಧಿ, ಸರ್ವ ಜನಾಂಗದ ಹಿತ ಕಾಪಾಡುವ ಸಾಮಾಜಿಕ ಕಳಿಕಳಿವುಳ್ಳ ಜನಪರ ಶಾಸಕರಾಗಿದ್ದು, ಕಲ್ಯಾಣ ಕರ್ನಾಟಕ ಭಾಗ ಸಮಗ್ರ ಅಭಿವೃದ್ಧಿ ಮಾಡಲು ಅನುಭವಿ ರಾಜಕಾರಣಿಗಳಿಗೆ ಮಂತ್ರಿಗಿರಿ ಕೊಡಬೇಕು. ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವಂತೆ ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಜಾಯಮಾನ ಅವರದ್ದು, ಈ ನಿಟ್ಟಿನಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗವನ್ನು ಕಲ್ಯಾಣ ಮಾಡುವ ನಿಟ್ಟಿನಲ್ಲಿ ಇಂಥವರಿಗೆ ಮಂತ್ರಿ ಮಾಡಬೇಕು. ಶಾಸಕರಾಗಿದ್ದುಕೊಂಡು ತಮ್ಮ ಕ್ಷೇತ್ರದಲ್ಲಿ ಜನಪರ, ಉತ್ತಮ ಆಡಳಿತ ನೀಡಿರುವ ಇವರು, ಬೇಧ, ಭಾವ ಎನ್ನದೆ ಜಾತಿ ಧರ್ಮ ಮಾಡದೆ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಅಪರೂಪದ ರಾಜಕಾರಣಿ ಆಗಿದ್ದಾರೆ. ಅಷ್ಟೇ ಅಲ್ಲ ನೇರ, ದಿಟ್ಟ, ಸರಳ ಸ್ವಭಾವದವರು. ಅನ್ನದಾತರಾಗಿದ್ದಾರೆ. ಹೀಗಾಗಿ, ಯಾದಗಿರಿ ಜಿಲ್ಲೆಯ ಪ್ರಾತಿನಿಧ್ಯ ಸೇವಾ ಹಿರಿತನ ಲೆಕ್ಕದಲ್ಲಿ ಶರಣಬಸಪ್ಪಗೌಡಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಧರ್ಮಿಬಾಯಿ ರಾಠೋಡ ಹೆಗ್ಗನದೊಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೂ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.