ಶಾಸಕ ಜಮೀರ್, ಬೇಗ್‌ಗೆ ಇಡಿ ಶಾಕ್


ಬೆಂಗಳೂರು,ಆ.೫- ಒಂದೆಡೆ ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದರೆ, ಮತ್ತೊಂದೆಡೆ ಮಾಜಿ ಸಚಿವ ರೋಷನ್ ಬೇಗ್ ಅವರಿಗೂ ಇಡಿ ಅಧಿಕಾರಿಗಳು ಬೆವರಿಳಿಸಿದ್ದಾರೆ.
ಇಬ್ಬರು ನಾಯಕರ ನಿವಾಸ ಕಚೇರಿಗಳ ಮೇಲೆ ಇಂದು ಮುಂಜಾನೆಯಿಂದ ದಾಳಿ ನಡೆಸಿ ಕಡತಗಳ ಪರಿಶೀಲನೆಯಲ್ಲಿ ತೊಡಗಿ ವಿಚಾರಣೆಗೆ ಮುಂದಾಗಿರುವುದರಿಂದ ಜಮೀರ್ ಅಹಮದ್ ಹಾಗೂ ರೋಷನ್ ಬೇಗ್ ಗೆ ಬಂಧನದ ಭೀತಿ ಎದುರಾಗಿದೆ.
ಶಾಸಕ ಜಮೀರ್ ಅವರ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯ ನೂತನ ಭವ್ಯ ಬಂಗಲೆ, ಯುಬಿಸಿಟಿಯಲ್ಲಿರುವ ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿನ ನ್ಯಾಷನಲ್ ಟ್ರಾವೆಲ್ ಕಚೇರಿ ಮತ್ತು ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇದಲ್ಲದೇ ಜಮೀರ್ ಅವರ ಸದಾಶಿವನಗರದ ಆಪ್ತನ ನಿವಾಸ ಸೇರಿ ೬ ಕಡೆ ದಾಳಿ ನಡೆಸಿ ದಾಖಲೆಪತ್ರಗಳ ಶೋಧ ನಡೆಸಲಾಗಿದೆ.ಬೆಳಗ್ಗೆ ಸುಮಾರು ೫.೪೫ಕ್ಕೆ ಏಕಕಾಲಕ್ಕೆ ಜಮೀರ್ ಅಹಮದ್ ಗೆ ಸೇರಿದ ಆಸ್ತಿಗಳ ಮೇಲೆ ನಗರವಲ್ಲದೇ ದೆಹಲಿಯಿಂದ ಬಂದಿದ್ದ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮನೆ ಕಚೇರಿ ಮೇಲೆ ದಾಳಿಯಲ್ಲಿ ವಶಪಡಿಸಿಕೊಂಡ ಆಸ್ತಿ ಪಾಸ್ತಿಯನ್ನು ದಾಖಲೆಗಳನ್ನು ಪರಿಶೀಲನೆಯಲ್ಲಿ ವಂಚನೆ ನಡೆಸಿರುವುದು ಕಂಡುಬಂದರೆ ಜಮೀರ್ ಅಹಮದ್ ಹಾಗೂ ಅವರ ಕುಟುಂಬದವರ ವಿಚಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಜಮೀರ್ ಅಹಮದ್ ಖಾನ್ ಇತ್ತೀಚೆಗೆ ಖರೀದಿಸಿದ ಆಸ್ತಿಯ ಮೌಲ್ಯದ ತಪ್ಪು ಲೆಕ್ಕ ನೀಡಿದ್ದಾರೆ ಎನ್ನಲಾಗಿದೆ. ಕೋಟ್ಯಾಂತರ ರೂ. ಹಣ ಖರ್ಚು ಮಾಡಿ ಪುತ್ರಿಯ ವಿವಾಹ ನಡೆಸಿದ್ದರು. ಜಮೀರ್ ಅಹಮದ್ ಖಾನ್ ಆದಾಯಕ್ಕಿಂತ ಹೆಚ್ಚಿನ ಹೊಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ರೋಷನ್ ಬೇಗ್ ಗೆ ಬಿಸಿ:
ಈ ನಡುವೆ ಬಹುಕೋಟಿ ವಂಚನೆ ನಡೆಸಿರುವ ಐಎಂಎ ಹಗರಣದ ಆರೋಪಿ ಹಾಗೂ ಮಾಜಿ ಸಚಿವ ಆರ್.ರೋಷನ್ ಬೇಗ್ ಮನೆ ಮೇಲೂ ಇಡಿಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕೋಲ್ಸ್ ಪಾರ್ಕ್?ನಲ್ಲಿರುವ ರೋಷನ್ ಬೇಗ್ ಮನೆ ಸೇರಿದಂತೆ ನಗರದ ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಆಸ್ತಿಪಾಸ್ತಿ ದಾಖಲೆಗಳ ಶೋಧ ನಡೆಸಲಾಗಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶ ನೀಡಿದ್ದು ಅದರಂತೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ೧೬.೮೧ ಕೋಟಿ ರೂ ಆಸ್ತಿ ಜಪ್ತಿ ಮಾಡಿದ್ದರು.
ವಶಕ್ಕೆ ಪಡೆದುಕೊಂಡಿದ್ದ ಆಸ್ತಿ ಮೌಲ್ಯದ ವರದಿಯನ್ನು ಇಡಿ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರ ಕಳುಹಿಸಿತ್ತು. ಈ ವರದಿ ಆಧರಿಸಿ ಇಡಿ ಅಧಿಕಾರಿಗಳು ಇಂದು ರೋಷನ್ ಬೇಗ್ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಇಡಿ ದಾಳಿ ವೇಳೆ ಶಸ್ತ್ರ ಸಜ್ಜಿತ ಪೊಲೀಸರ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು
೫ ಕೋಟಿ ಕಂಟಕ:
ಐಎಂಎ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ನಗರದ ರಿಚ್ಮಂಡ್ ಸರ್ಕಲ್ ಬಳಿಯಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿದ್ದು ೨.೫ ಕೋಟಿ ಬೆಲೆಗೆ ಖರೀಸಿದ್ದ ಈ ಆಸ್ತಿಯನ್ನು ಜಮೀರ್ ೫ ಕೋಟಿ ರೂ.ಗೆ ಮಾರಿದ್ದರು.
ಇದೇ ನಿವೇಶನ ಜಮೀರ್ ಅಹ್ಮದ್ ಅವರಿಗೆ ಕಂಟಕವಾಗುವ ಸಂಭವವಿದೆ ಈ ಸಂಬಂಧ ಎಸ್‌ಐಟಿ ಮತ್ತು ಸಿಬಿಐ ವಿಚಾರಣೆಗೂ ಜಮೀರ್ ಅಹ್ಮದ್ ಹಾಜರಾಗಿದ್ದರು.
೫ ಕೋಟಿ ಚಿನ್ನ:
ಶಾಸಕ ಜಮೀರ್ ಐಎಂಎ ಗೋಲ್ಡ್‌ನಿಂದ ೫ ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿರುವ ಮಾಹಿತಿ ಹೊರಬಿದ್ದಿದೆ,ಮಗಳ ಮದುವೆಯ ಸಂದರ್ಭದಲ್ಲಿ ಜಮೀರ್ ಅವರು ಮನ್ಸೂರ್ ಬಳಿ ೯ ಕೋಟಿ ಹಣ ಪಡೆದಿದ್ದಾರೆ. ಉಳಿದಿದ್ದ ಹಣವನ್ನು ಚಿನ್ನದ ರೂಪದಲ್ಲಿ ಪಡೆದುಕೊಂಡಿದ್ದರು.
ಐಎಂಎ ಗೋಲ್ಡ್‌ನಿಂದ ೫ ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಜಮೀರ್, ಬಡ್ಡಿಯ ರೂಪದಲ್ಲಿಯೂ ಕೂಡ ಹಣ ಪಡೆದುಕೊಂಡಿದ್ದರೆಂಬ ಮಾಹಿತಿ ತಿಳಿದುಬಂದಿದೆ.