ಶಾಸಕ ಜನಾರ್ದನರೆಡ್ಡಿ, ಪತ್ನಿ ಅರುಣಾ ಬಿಜೆಪಿಗೆ ಸೇರ್ಪಡೆ

ಪ್ರಗತಿಪಕ್ಷ ವಿಲೀನ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ, ಶಾಸಕ ಜಿ. ಜನಾರ್ಧನ ರೆಡ್ಡಿಯವರು ಇಂದು ಬಿಜೆಪಿ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಸಿ.ಟಿ. ರವಿ, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಬೆಂಗಳೂರು, ಮಾ. ೨೫- ಕಲ್ಯಾಣ ಕರ್ನಾಟಕ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಿರುವ ಶಾಸಕ ಜನಾರ್ದನರೆಡ್ಡಿ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಶಾಸಕ ಜನಾರ್ದನರೆಡ್ಡಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಾಗಿ ಘೋಷಿಸಿದರು
ಇದೇ ಸಂದರ್ಭದಲ್ಲಿ ಜನಾರ್ದನರೆಡ್ಡಿ ಅವರ ಪತ್ನಿ ಅರುಣಾಲಕ್ಷ್ಮಿ ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದು, ಇವರನ್ನೆಲ್ಲಾ ಪಕ್ಷದ ಧ್ವಜ ಕೊಟ್ಟು, ಶಾಲು ಹಾಕಿ, ವಿಜಯೇಂದ್ರ ಅವರು ಬಿಜೆಪಿಗೆ ಬರ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಜನಾರ್ದನರೆಡ್ಡಿ ಅವರ ಒಂದು ಕಾಲದ ಆಪ್ತಮಿತ್ರ ಮಾಜಿ ಸಚಿವ ಬಿ, ಶ್ರೀರಾಮುಲು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಿ.ವೈ. ವಿಜಯೇಂದ್ರ ಸಂತಸ
ಮಾಜಿ ಸಚಿವ ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಬಿಜೆಪಿಗೆ ಸೇರಿರುವುದು ಬಹಳ ಸಂತಸ ತಂದಿದೆ. ಅವರು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವನ್ನು ಸ್ಥಾಪನೆ ಮಾಡಿ ಅವರದೇ ಆದ ರೀತಿಯಲ್ಲಿ ಪಕ್ಷ ನಡೆಸಿಕೊಂಡು ಬಂದಿದ್ದರು. ಈಗ ಅವರು ಪಕ್ಷವನ್ನು ವಿಸರ್ಜನೆ ಮಾಡಿ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿದ್ದಾರೆ ಎಂದರು.
ಶಾಸಕ ಜನಾರ್ದನರೆಡ್ಡಿ ಅವರ ಪಕ್ಷ ಸೇರ್ಪಡೆಯಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಮೋದಿ ನಾಯಕತ್ವ ಒಪ್ಪಿ ಪಕ್ಷಕ್ಕೆ ಬಂದಿದ್ದಾರೆ ಎಂದರು.
ಮೋದಿ ಅವರು ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಏಕೈಕ ಉದ್ದೇಶ ಇಟ್ಟುಕೊಂಡು ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ ಎಂದರು
ನನ್ನ ಮನೆಗೆ ವಾಪಸ್ ರೆಡ್ಡಿ
ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಶಾಸಕ ಜನಾರ್ದನರೆಡ್ಡಿ ಅವರು, ನನ್ನ ಮನೆಗೆ ನಾನು ವಾಪಸ್ ಬಂದಿದ್ದೇನೆ. ಬಿಜೆಪಿ ತಾಯಿ ಮಡಲಿಗೆ ಸುರಕ್ಷಿತವಾಗಿ ಬಂದು ಸೇರಿದ್ದೇನೆ ಎಂದು ಭಾವುಕರಾಗಿ ಹೇಳಿದರು.
೧೩ ವರ್ಷಗಳ ಬಳಿಕ ಬಿಜೆಪಿಗೆ ಬಂದಿದ್ದೇನೆ ಎನಿಸುತ್ತಿಲ್ಲ. ನಿನ್ನೆ ಹೋಗಿ ಇಂದು ಬಂದಂತೆ ಭಾಸವಾಗುತ್ತದೆ ಎಂದು ಹೇಳಿದ ಅವರು, ಸಾಮಾನ್ಯ ಕಾರ್ಯಕರ್ತರನಾಗಿ ಪಕ್ಷದಲ್ಲಿ ಕೆಲಸ ಮಾಡುತ್ತಾನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಿಭಾಯಿಸುತ್ತೇನೆ. ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರಿದ್ದೇನೆ ಎಂದರು.
ನಾನು ಚಿಕ್ಕ ವಯಸ್ಸಿನಲ್ಲೇ ಬಿಜೆಪಿಯಲ್ಲಿ ಕೆಲಸ ಮಾಡಿದ್ದೆ. ಯಡಿಯೂರಪ್ಪನವರ ಸಚಿವ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಅವರ ಬಗ್ಗೆ ಅಪಾರ ಗೌರವವಿದೆ. ಇಂದು ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ತಂದೆ ಮತ್ತು ಮಗನ ಜತೆಗೆ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲವು ದಿನಗಳ ಹಿಂದೆ ದೆಹಲಿಗೆ ಕರೆಸಿಕೊಂಡಿದ್ದರು. ಬಾಹ್ಯ ಬೆಂಬಲ ಬೇಡ ಪಕ್ಷಕ್ಕೆ ಸೇರಿ ಎಂದಿದ್ದರು. ಅದರಂತೆ ನಾನು ಪಕ್ಷ ಸೇರಿದ್ದೇನೆ. ನನ್ನ ಆಪ್ತಮಿತ್ರ ಶ್ರೀರಾಮುಲು ಅವರಿಗೂ ಧನ್ಯವಾದಗಳು ಎಂದು ರೆಡ್ಡಿ ಹೇಳಿದರು.
ಪ್ರಧಾನಿ ಮೋದಿ ಅವರು ವಿಶ್ವಗುರು ಆಗಿದ್ದಾರೆ. ಅವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ನಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಜನಾರ್ಧನರೆಡ್ಡಿ ಹೇಳಿದರು.
ಜಾನ್ ಪುತ್ರ ಸೇರ್ಪಡೆ
ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ದಿ. ಟಿ. ಜಾನ್ ರವರ ಪುತ್ರ ಥಾಮಸ್ ಕೂಡಾ ಬಿಜೆಪಿಗೆ ಸೇರ್ಪಡೆಯಾದರು.