ಶಾಸಕ ಗೋಪಾಲಯ್ಯಗೆ ಕೊಲೆ ಬೆದರಿಕೆ: ಪದ್ಮರಾಜ್ ಬಂಧನ

ಕಲಾಪದಲ್ಲಿ ಕಾವೇರಿದ ಚರ್ಚೆ

ಬೆಂಗಳೂರು, ಫೆ. ೧೪- ಬಿಜೆಪಿ ಶಾಸಕ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಶೂನ್ಯ ವೇಳೆಯಲ್ಲಿ ಸಚಿವ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿರುವ ವಿಚಾರ ಪ್ರಸ್ತಾಪವಾಗಿ ಇಡೀ ಸದನ ಅವರ ಬೆನ್ನಿಗೆ ನಿಂತು ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿತು. ಸಭಾಧ್ಯಕ್ಷ ಯು.ಟಿ. ಖಾದರ್ ಸಹ ಶಾಸಕರಿಗೆ ಕೊಲೆ ಬೆದರಿಕೆ ಗಂಭೀರ ವಿಚಾರ, ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಗೆ ಕಠಿಣ ಸಂದೇಶ ಹೋಗಬೇಕು. ಕೂಡಲೇ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಬಂಧಿಸಿ ಇಲ್ಲವೆ ಸಂಬಂಧಪಟ್ಟ ಇನ್ಸ್‌ಪೆಕ್ಟರನ್ನು ಬಂಧಿಸುವಂತೆ ರೂಲಿಂಗ್ ನೀಡಿದರು.
ಶಾಸಕರ ಕೊಲೆ ಬೆದರಿಕೆ ವಿಚಾರ ಕಾವೇರಿದ ಚರ್ಚೆ ನಡೆದ ನಂತರ ಸದನಕ್ಕೆ ಆಗಮಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಶಾಸಕ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಬಿಬಿಎಂಪಿಯ ಮಾಜಿ ಸದಸ್ಯ ಪದ್ಮರಾಜ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೋಪಾಲಯ್ಯ, ತಮಗೆ ಕೊಲೆ ಬೆದರಿಕೆ ಹಾಕಿರುವ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿಯ ಶಾಸಕ ಗೋಪಾಲಯ್ಯ ಅವರು, ನಿನ್ನೆ ರಾತ್ರಿ ೧೧ ಗಂಟೆ ೧ ನಿಮಿಷ ಸಮಯದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಪದ್ಮರಾಜ್ ಅವರು ತಮಗೆ ದೂರವಾಣಿ ಕರೆ ಮಾಡಿ ಹಣ ನೀಡುವಂತೆ ಒತ್ತಾಯಿಸಿದರು. ನಾನು ನಿನಗೆ ಹಣ ಕೊಡಲು ನೀನೇನು ನನ್ನ ಚಿಕ್ಕಪ್ಪ, ದೊಡ್ಡಪ್ಪನ ಎಂದು ಹೇಳಿದೆ. ಆಗ ಪದ್ಮರಾಜ್ ನನ್ನ ಬಗ್ಗೆ ಹಾಗೂ ನನ್ನ ಕುಟುಂಬದ ಬಗ್ಗೆ ಅವಾಚ್ಯವಾಗಿ, ಕೆಟ್ಟದಾಗಿ ಮಾತನಾಡಿದರು. ಆ ಶಬ್ದಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಹಾಗೆಯೇ ಹುಡುಗರನ್ನು ಕಳುಹಿಸಿ ಮನೆ ಲೂಟಿ ಮಾಡುತ್ತೇನೆ. ಕೊಲೆ ಮಾಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಈತನಿಗೆ ಬಸವೇಶ್ವರನಗರದಲ್ಲಿ ಕ್ಲಬ್ ಇದೆ. ಆ ಹಣದಲ್ಲಿ ಕುಡಿದು ಮದ ಏರಿ ಈ ರೀತಿ ಕೊಲೆ ಬೆದರಿಕೆ ಹಾಕಿದ್ದಾನೆ. ಈತ ನನಗಷ್ಟೇ ಅಲ್ಲ ಹಿಂದೆ ಹಿರಿಯ ಶಾಸಕರಾದ ಸುರೇಶ್‌ಕುಮಾರ್ ಅವರಿಗೂ ಅನೇಕ ಬಾರಿ ಈ ರೀತಿ ಕೆಟ್ಟದ್ದಾಗಿ ಮಾತನಾಡಿದ್ದಾನೆ. ಅವರು ದೂರು ಕೊಟ್ಟಿಲ್ಲ ಅಷ್ಟೇ. ನನಗೆ ಕೊಲೆ ಬೆದರಿಕೆ ಹಾಕಿರುವ ಪದ್ಮರಾಜ್‌ನ್ನು ಗಡಿಪಾರು ಮಾಡಿ ಸಮಾಜಘಾತಕ ಶಕ್ತಿಗಳನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.
ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ಪದ್ಮರಾಜ್ ಹುಡುಗರನ್ನು ಕಳುಹಿಸಿ ನನ್ನ ಕುಟುಂಬದವರ ಮೇಲೆ ಹಲ್ಲೆ ಮಾಡಬಹುದು. ಹಾಗಾಗಿ ಸೂಕ್ತ ರಕ್ಷಣೆ ನೀಡುವಂತೆಯೂ ಒತ್ತಾಯಿಸಿದರು
ಈ ಕೊಲೆ ಬೆದರಿಕೆ ಬಗ್ಗೆ ನಿನ್ನೆ ರಾತ್ರಿಯೇ ನಾನು ಸಂಬಂಧಪಟ್ಟ ಪೊಲೀಸ್ ಡಿಸಿಪಿ, ಎಸಿಪಿಗಳ ಜೊತೆ ಮಾತನಾಡಿದ್ದೇನೆ. ಅವರು ಪದ್ಮರಾಜ್ ಮನೆಗೆ ಹೋಗಿ ಹೊರಗೆ ನಾಯಿ ಕಾಯುವ ಹಾಗೆ ಕಾಯ್ದಿದ್ದಾರೆ. ಆತ ಹೊರಗೆ ಬಂದಿಲ್ಲ. ಮನೆಯೊಳಗೆ ಇದ್ದರೂ ಅದೇನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಹೀಗಾದರೆ ಹೇಗೆ. ನನಗೆ ರಕ್ಷಣೆ ಬೇಕು ಎಂದು ಹೇಳಿದರು.
ಶಾಸಕರ ಗೋಪಾಲಯ್ಯ ಅವರ ಬೆಂಬಲಕ್ಕೆ ನಿಂತ ಸದಸ್ಯ ಸುನಿಲ್‌ಕುಮಾರ್, ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲ ಎಂದರೇ ಹೇಗೆ ಗೋಪಾಲಯ್ಯ ಅವರು ಮಾಜಿ ಸಚಿವರು, ಇಲ್ಲಿ ರಾಜಕಾರಣ ಬೇಡ. ಶಾಸಕರಿಗೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯ ಬಂಧನ ಇದುವರೆಗೆ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಗೋಪಾಲಯ್ಯ ನವರು ಸಜ್ಜನರಿದ್ದಾರೆ. ಈ ರೀತಿ ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಖಂಡನೀಯ. ಕೂಡಲೇ ಕೊಲೆ ಬೆದರಿಕೆ ಹಾಕಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಸುರೇಶ್‌ಕುಮಾರ್ ಅವರು ಸಹ ಗೋಪಾಲಯ್ಯ ಅವರ ಬೆಂಬಲಕ್ಕೆ ನಿಂತು ಗೋಪಾಲಯ್ಯನವರಿಗೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯ ಬೆದರಿಕೆಯ ಫಲಾನುಭವಿಗಳಲ್ಲಿ ನಾನು, ಆರ್. ಅಶೋಕ್ ಸಹ ಇದ್ದೇವೆ. ಆತನ ಅಟ್ಟಹಾಸ ಹೆಚ್ಚಿದೆ. ಅವರ ಕಟ್ಟಡದಲ್ಲೇ ಕ್ಲಬ್ ನಡೆಯುತ್ತದೆ. ಬೇರೆಡೆ ಎಲ್ಲ ಕ್ಲಬ್ ಬಂದ್ ಆಗುತ್ತದೆ. ಇಲ್ಲಿ ಮಾತ್ರ ಕ್ಲಬ್ ಬಂದ್ ಆಗಿಲ್ಲ. ಬೆದರಿಕೆ ಹಾಕಿರುವ ಆತನ ಬಂದನವೂ ಆಗಿಲ್ಲ. ಮನೆಯೊಳಗೆ ಕುಳಿತು ಆತ ಫೋನ್ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಹೇಳುತ್ತಿದ್ದಾನೆ. ಇದು ಸರಿಯಲ್ಲ ಕೂಡಲೇ ಪದ್ಮರಾಜ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯ ಬಂಧನ ಆಗದ ಬಗ್ಗೆ ಆಕ್ರೋಶ ಹೊರಹಾಕಿದರು. ಕುಡಿದು ನಶೆ ಇಳಿದ ಮೇಲೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾನೂನಿದೆಯೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗದೆ ರಾಜ್ಯಾ ಆತಿಥ್ಯ ನೀಡಲಾಗುತ್ತಿದೆ ಎಂದು ಪ್ರಶ್ನಿಸಿ, ಜನಪ್ರತಿನಿಧಿಗಳಿಗೆ ಈ ರೀತಿ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು. ಈತನಿಗೆ ನೀಡುವ ಶಿಕ್ಷೆ ಇಡೀ ರಾಜ್ಯಕ್ಕೆ ಮಾದರಿಯಾಗಿ ಮುಂದೆ ಈ ರೀತಿ ಯಾರೂ ಬೆದರಿಕೆ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು, ಗೃಹ ಸಚಿವರು ಪರಿಷತ್‌ನಲ್ಲಿದ್ದಾರೆ. ಅವರು ಈ ಬಗ್ಗೆ ಉತ್ತರ ಕೊಡುತ್ತಾರೆ. ಕಾನೂನು ಎಲ್ಲರಿಗೂ ಸಮಾನ. ಪಕ್ಷಪಾತವಾಗಲಿ, ತಾರತಮ್ಯವಾಗಲಿ ಮಾಡುವ ಉದ್ದೇಶ ನಮಗಿಲ್ಲ. ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪದ್ಮರಾಜ್ ಮತ್ತು ನಾನು ಹಾಗೂ ಗೋಪಾಲಯ್ಯ ಹಿಂದೆ ಒಂದೇ ಪಕ್ಷದಲ್ಲಿ ಇದ್ದೇವು. ಈ ಗ ಎಲ್ಲಿದ್ದಾನೋ ಗೊತ್ತಿಲ್ಲ. ಏನೇ ಇರಲಿ ಈತನ ವಿರುದ್ಧ ಕ್ರಮ ಆಗುತ್ತದೆ ಎಂದರು
ನಂತರ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್, ಶಾಸಕರಿಗೆ ಬೆದರಿಕೆ ಹಾಕಿರುವುದು ಗಂಭೀರ ವಿಚಾರ. ಇಂತಹ ವ್ಯಕ್ತಿಗಳಿಗೆ ಕಠಿಣ ಸಂದೇಶ ಕೊಡಬೇಕಿದೆ. ಸಂಜೆಯೊಳಗೆ ಈತನನ್ನು ಬಂಧಿಸಿ ಇಲ್ಲದಿದ್ದರೆ ಸಂಬಂಧಪಟ್ಟ ಪೊಲೀಸ್ ಇನ್ಸ್‌ಪೆಕ್ಟರ್‌ನ್ನು ಅಮಾನತು ಮಾಡಿ ಎಂದು ಸರ್ಕಾರಕ್ಕೆ ಸೂಚಿಸಿದರು.
ಈ ಹಂತದಲ್ಲಿ ಮತ್ತೆ ಎದ್ದು ನಿಂತ ಗೋಪಾಲಯ್ಯ ಅವರು, ಕ್ಲಬ್‌ಗಳ ಹಣದಿಂದ ಈ ರೀತಿಯ ಪ್ರಕರಣಗಳಾಗುತ್ತಿವೆ. ಕ್ಲಬ್‌ಗಳನ್ನು ಬಂದ್ ಮಾಡಿ ಎಂದು ಒತ್ತಾಯಿಸಿ ಬೆದರಿಕೆ ಹಾಕಿರುವ ವ್ಯಕ್ತಿಗೆ ಪ್ರತ್ಯುತ್ತರ ಕೊಡುವುದು ನನಗೂ ಗೊತ್ತಿದೆ. ಆದರೆ ಶಾಸಕ ಸ್ಥಾನದ ಗೌರವನ್ನು ಗಮನದಲ್ಲಿಟ್ಟುಕೊಂಡು ಸುಮ್ಮನಾಗಿ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದೆ ಎಂದು ಹೇಳಿದರು.
ಪದ್ಮರಾಜ್ ವಿರುದ್ಧ ಎಫ್‌ಐಆರ್
ವಿಧಾನಸೌಧಕ್ಕೆ ಹೋಗುವಾಗ ಕೊಂದೇ ಕೊಲ್ಲುತ್ತೇನೆ. ಮನೆಯೊಳಗೆ ಬಂದು ಕೊಲೆ ಮಾಡುತ್ತೇನೆ ಎಂದು ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಕೊಲೆ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಗೋಪಾಲಯ್ಯ ಮನೆ ಬಳಿ ಬಂದು ಪದ್ಮರಾಜ್ ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಗೋಪಾಲಯ್ಯ ಮತ್ತು ಪದ್ಮರಾಜ್ ನಡುವೆ ಗಲಾಟೆ ನಡೆದಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಗೋಪಾಲಯ್ಯ ಕುಳಿತಿದ್ದು, ಪದ್ಮರಾಜ್ ಮನೆಯ ಮುಂದೆ ೪ ಹೊಯ್ಸಳ ಪೊಲೀಸರನ್ನು ನಿಯೋಜಿಸಲಾಗಿದೆ.ಪದ್ಮರಾಜ್ ತಡರಾತ್ರಿ ಗೋಪಾಲಯ್ಯರವರಿಗೆ ಕರೆ ಮಾಡಿ ಹಣ ನೀಡುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಣ ಕೊಡದಿದ್ದರೆ ಏನು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.ಇದರಿಂದ ನೊಂದ ಗೋಪಾಲಯ್ಯ, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋಪಾಲಯ್ಯ, ಪದ್ಮರಾಜ್‌ಗೆ ಸಾಕಷ್ಟು ಬಾರಿ ಸಹಾಯ ಮಾಡಿದ್ದೇನೆ. ಕುಡಿದು ಬಂದು ನನ್ನನ್ನು ನಿಂದಿಸಿರುವುದು ನೋವಾಗಿದೆ ಎಂದು ಅಳಲು ತೋಡಿಕೊಂಡರು. ಕಳೆದ ಏಪ್ರಿಲ್‌ನಲ್ಲಿ ಪದ್ಮರಾಜ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.