ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ದ ಕರ್ನಾಟಕ ಸಮತಾ ಸೈನಿಕ ದಳದ ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ.ಸೆ.24: ಪ್ರಸಕ್ತ  ನಡೆಯುತ್ತಿರುವ ವಿಧಾನಸಭೆಯ ಪ್ರಶೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟೆ ಶೇಖರ್ ಸೇರಿದಂತೆ ಕೆಲ ಶಾಸಕರು ಮಾತನಾಡಿ ಕ್ರೈಸ್ತ ಮಿಷನರಿಗಳು ರಾಜ್ಯದಲ್ಲಿ ವ್ಯಾಪಕವಾಗಿ ಮತಾಂತರ ಮಾಡುತ್ತಿದ್ದಾರೆ. ಎಂದು ತಪ್ಪು ಗ್ರಹಿಕೆಯ ಹೇಳಿಕೆ ನೀಡಿದ್ದೂ ಅಲ್ಲದೇ, ಮತಾಂತರವನ್ನು ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಮತ್ತು ಅತ್ಯಾಚಾರ ಪ್ರಯತ್ನ ಪ್ರಕರಣಗಳನ್ನು ದಾಖಲಿಸುತ್ತಾರೆ ಎಂದು ಸುಳ್ಳು ಹೇಳಿಕೆ ನೀಡಿರುವುದನ್ನು ಹಾಗೂ ಕ್ರೈಸ್ತ ಸಂಘಟನೆಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ನಿನ್ನೆ  ‘ಕರ್ನಾಟಕ ಸಮತಾ ಸೈನಿಕ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಮತಾ ಸೈನಿಕ ದಳದ ಪ್ರತಿಭಟನೆಯನ್ನು ಬೆಂಬಲಿಸಿ, ಕ್ರೈಸ್ತ ಸಂಘಟನೆಗಳ ಒಕ್ಕೂಟ ಹಾಗೂ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಹಳೆ ಬಸ್‌ನಿಲ್ದಾಣದ ಬಳಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಗಡಿಗೆ ಚೆನ್ನಪ್ಪ ಸರ್ಕಲ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ ಸರ್ಕಲ್, ತೇರುಬೇದಿ, ಗವಿಯಪ್ಪ ಸರ್ಕಲ್ ಮೂಲಕ ಡಿಸಿ ಕಛೇರಿಗೆ ಬಂದು ತಲುಪಿತು.
ಇಲ್ಲಿ ಕೆಲಕಾಲ ಪ್ರತಿಭಟನಾ ಘೋಷಣೆಗಳನ್ನು ಕೂಗಿ ಜಿಲ್ಲಾಡಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಯಾವುದೋ ಒಂದು ಪ್ರಕರಣವನ್ನು ಉದ್ದೇಶದಲ್ಲಿ ಇಟ್ಟುಕೊಂಡು ಇಡೀ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ಸುಳ್ಳು ಆರೋಪ ಹೊರಿಸಿ, ಅಪಮಾನವಾಗುವಂತೆ  ಶಾಸಕರು ಮಾತನಾಡಿರುವುದನ್ನು ಸಮತಾ ಸೈನಿಕ ದಳ ಮಾತ್ರವಲ್ಲದೇ, ಕ್ರೈಸ್ತ ಸಮುದಾಯದ ಎಲ್ಲರೂಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಶಾಸಕರಾದ ಗೂಳಿಹಟ್ಟಿ ಶೇಖರ್‌ ಮತ್ತು ಇತರರು ಮಾತನಾಡಿರುವುದು ಸರಿಯಲ್ಲ, ಅಂತೆಯೇ ರಾಜ್ಯದ
ಗೃಹಸಚಿವರು, ಸಭಾಪತಿಗಳು, ಕೆಲ ಶಾಸಕರು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸವಿಸ್ತಾರವಾಗಿ ಚರ್ಚಿಸಬೇಕು ಹಾಗೂ ಎಲ್ಲಾ ರಾಜಕೀಯ ಪಕ್ಷಗಳು, ವಿರೋಧಪಕ್ಷದ ನಾಯಕರು ಪ್ರಸ್ತಾಪಿಸಿದ ವಿಷಯದ ಬಗ್ಗೆಯೂ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿಯಿತು.
ಸಂವಿಧಾನದಲ್ಲಿ ಯಾವ ವ್ಯಕ್ತಿಯು, ಯಾವುದೇ ಧರ್ಮ ಸೇರಬಹುದು. ಒಪ್ಪಕೊಳ್ಳಬಹುದು ಎಂದಿದೆ. ಮತಾಂತರಕ್ಕೆ ಆವಕಾಶವಿರುವಾಗ, ಕೆಲವೊಂದು ವ್ಯಕ್ತಿಗಳು, ಸಂಘಟನೆಗಳು ಧರ್ಮದ ಹೆಸರಿನಲ್ಲಿ ಕ್ರೈಸ್ತರಿಗೆ ತೊಂದರೆ ಕೊಡಲು ಯತ್ನಿಸಿರುವುದು ಸರಿಯಲ್ಲ ಎಂದರು.
ಕ್ರೈಸ್ತ ಬಾಂಧವರು ಶಾಂತಿಪ್ರಿಯರು, ಸಂವಿಧಾನ ಮತ್ತು ಕಾನೂನಿನ ಮೇಲೆ ನಂಬಿಕೆ ಹೊಂದಿದ್ದೇವೆ. ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುತ್ತೇವೆ. ವಿನಾಕಾರಣ ಸಮುದಾಯದವರ ಮೇಲೆ ವೃಥಾ ಆರೋಪ ಹೊರಿಸುವುದನ್ನು ನಿಲ್ಲಿಸಬೇಕು. ಶಾಸಕರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಯಿತು.
ರಾಜ್ಯ ಸರ್ಕಾರವು ಕ್ರೈಸ್ತರ ಮೇಲಿನ ದೌರ್ಜನ್ಯ ಹಲ್ಲೆಗಳನ್ನು ತಡೆಗಟ್ಟಬೇಕು. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸಾವಿರ ಕೋಟಿ ರೂ.ಗಳ ಅನುದಾನ ನೀಡಬೇಕು. ಕ್ರೈಸ್ತ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಪ್ರತ್ಯೇಕ ಅನುದಾನ ತೆಗೆದಿಡಬೇಕು. ಮತ್ತಿತರ ಬೇಡಿಕೆಯುಳ್ಳ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕರ್ನಾಟಕ ಸಮತಾ ಸೈನಿಕ ದಳದ ಕಲ್ಬುರ್ಗಿ ವಿಭಾಗದ ಕಾರ್ಯಧ್ಯಕ್ಷ ಪೃಥ್ವಿರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಒಕ್ಕೂಟದ ಕ್ರೈಸ್ತ ಮುಖಂಡರುಗಳಾದ ಜೆರಾಲ್ಡ್, ಕ್ರಿಷ್ಟೋಫರ್, ಪ್ರಭಾಕರ್,  ಚಂದ್ರಶೇಖರ್, ಜೋಸೆಫ್‌ರಾಜ, ವಸಂತ್‌ಕುಮಾರ್, ಸುಧೀರ್ ಮತ್ತಿತರರು ಪಾಲ್ಗೊಂಡಿದ್ದರು.