ಶಾಸಕ ಗಣೇಶ್ ನನ್ನ ಮೇಲೆ ನೂರು ಕೇಸ್ ಹಾಕಿಸಲಿ  ಹೆದರುವುದಿಲ್ಲ: ನಾರಾಯಣಪ್ಪ


(ಸಂಜೆವಾಣಿ ವಾರ್ತೆ)
ಕಂಪ್ಲಿ ಜು 26 :  ನನಗೆ ಸಂಬಂಧ ಇಲ್ಲದ ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಕೇಸ್ ನಲ್ಲಿ ನನ್ನ ಹೆಸರು ಸೇರಿಸಿ ಎಫ್ಐಆರ್ ದಾಖಸಿದ್ದಾರೆ ಶಾಸಕ ಜೆ.ಎನ್.ಗಣೇಶ್ ಅವರು.   ಇಂತಹ ನೂರು ಕೇಸ್ ಹಾಕಿಸಿದರು ನಾನು ಹೆದರುವುದಿಲ್ಲ ಫೇಸ್ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ರಾಮಸಾಗರ ಬಿ. ನಾರಾಯಣಪ್ಪ ಹೇಳಿದ್ದಾರೆ.
ನಿನ್ನೆ  ಸಂಜೆ ವಕೀಲ ಭರತ್ ಕುಮಾರ್ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು. ನಾನು ಈ ಮುಂಚೆ ಜೆಡಿಎಸ್ ಪಕ್ಷದಲ್ಲಿದ್ದೆ, ಕಳೆದ 10 ವರ್ಷದಿಂದ ಕಾಂಗ್ರೆಸ್ ಪಕ್ಷದ ಲ್ಲಿದ್ದೇನೆ. ಕಂಪ್ಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಬಯಸಿದ್ದ ನನಗೆ ಜೆಡಿಎಸ್ ನಲ್ಲಿ ಟಿಕೆಟ್ ತಪ್ಪಿತ್ತು. ಕಾಂಗ್ರೆಸ್ ಗೆ ಬಂದ ಮೇಲೆ ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಗೆ ಪೈಪೋಟಿ ನಡೆಸಿದ್ದೆ, ಆಗ ಪಕ್ಷದ  ಹಿರಿಯ ಮುಖಂಡರಾದ ಅಲ್ಲಂ
ವೀರಭದ್ರಪ್ಪ, ನಾರಾ ಸೂರ್ಯನಾರಾಯಣ ರೆಡ್ಡಿ, ಕಾರ್ಯಕರ್ತರೆಲ್ಲರು ಈ ಬಾರಿ  ಜೆ. ಎನ್.ಗಣೇಶ್ ಅವರನ್ನು  ಬೆಂಬಲಿಸೋಣ ಎಂದು ಅವರನ್ನು ಗೆಲ್ಲಿಸಿದೆವು.

ಟಿಕೆಟ್ ಆಕಾಂಕ್ಷಿ:
ಸ್ಥಳೀಯರು, ಹಿರಿಯರ ಅಪೇಕ್ಷೆ ಮತ್ತು ಬೆಂಬಲದೊಂದಿಗೆ ಕಳೆದ 2 ತಿಂಗಳಿಂದ ನಾನು ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದ ಜನರನ್ನು ಸಂಪರ್ಕಿಸುತ್ತಿದ್ದೇನೆ.

ದ್ವೇಷ ರಾಜಕಾರಣ:
ನಾನು ಟಿಕೆಟ್ ಆಕಾಂಕ್ಷಿ ಎಂದು ಓಡಾಟ ಆರಂಭಿಸಿದಾಗಿನಿಂದ ಹಾಲಿ ಶಾಸಕ ನನ್ನ ಮೇಲೆ ದ್ವೇಷ ಸಾಧಿಸಲು ಶುರು ಮಾಡಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಅನ್ನ ಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಪ್ರಕರಣದಲ್ಲಿ ವಿನಾಕಾರಣ ನನ್ನ ಹೆಸರು ಬಳಸಿ ಅವಾಚ್ಯವಾಗಿ ಬೈದಿದ್ದಾರೆ. ಅವರೇನು ಸಾಚಾನಾ,   ಶಾಲಾ ಮಕ್ಕಳ ಬೂಟ್ ನಲ್ಲಿ, ಅಂಗನವಾಡಿ ಫುಡ್ ನಲ್ಲಿ. ಗುತ್ತಿಗೆದಾರರಿಂದ ಕನಿಷ್ಟ 10-12 ಸಾವಿರ ಕಮೀಷನ್ ಪಡೆದಿದ್ದಾರೆ ಎಂದು ಆರೋಪಿಸಿದರು.

 ಅಕ್ರಮ ಆಸ್ತಿ:
ಗಣೇಶ ಅವರು ಕಂಪ್ಲಿಗೆ ಬಂದಾಗ ಏನಿತ್ತು ಎಂದು ಪ್ರಶ್ನಿಸಿದ ನಾರಾಯಣಪ್ಪ ಅವರು, ಈಗ ಶಾಸಕರು  ಮರಿಯಮ್ಮನಹಳ್ಳಿ, ಕುರುಗೋಡು, ಕಂಪ್ಲಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಕಂಪ್ಲಿಯಲ್ಲಿ ನಾಲ್ಕುವರೆ ಕೋಟಿ ರೂ ಮನೆ ಖರೀದಿಸಿದ್ದಾರೆ. ಇದೆಲ್ಲ ಎಲ್ಲಿಂದ ಬಂತು ಎಂದರು

 ಪ್ರಮಾಣಕ್ಕೆ ಬಾ:
ನೀನು ಸಾಚಾ ಆಗಿದ್ದರೆ,  ಅಕ್ರಮ ಆಸ್ತಿ ಮಾಡದಿದ್ದರೆ ನೀನು.. ನಿನ್ನ ಹೆಂಡತಿ, ಮಕ್ಕಳನ್ನು ಕರೆದು ಕೊಂಡು ಬಾ, ನಾನು ನನ್ನ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಕುರುಗೋಡು ದೊಡ್ಡ ಬಸಪ್ಪನ ದೇವಸ್ಥಾನಕ್ಕೆ ಬರುತ್ತೇನೆ. ಅಲ್ಲಿ  ಪ್ರಮಾಣ ಮಾಡೋಣ ಎಂದು ಶಾಸಕ  ಗಣೇಶ್ ಗೆ ಕರೆದಿದ್ದಾರೆ.

 ಸ್ಥಳೀಯರಿಗೆ ಆಧ್ಯತೆ ಬೇಕು:
ಕಂಪ್ಲಿ ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರ ಸ್ಥಳೀಯರು ಇಲ್ಲಿ ಚುನಾವಣೆಗೆ ನಿಲ್ಲಬಾರದ, ಕಳೆದ  2 ಬಾರಿ ಸುರೇಶ್ ಬಾಬು, 1 ಬಾರಿ ನೀನು ಶಾಸಕರಾಗಿದ್ದೀರಿ, ಸ್ಥಳಿಯರೇಕೆ ಶಾಸಕರಾಗಬಾರದು.
ಈ ಬಾರಿ ಜನತೆ ಸ್ಥಳೀಯರಿಗೆ  ಆಧ್ಯತೆ ನೀಡಲು ಬಯಸಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿ ಆಗಿದ್ದೇನೆ ಉಳಿದಿದ್ದು ಜನ, ಮುಖಂಡರು ತೀರ್ಮಾನ ಮಾಡುತ್ತಾರೆಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಎನ್. ವೀರೇಶ್ ಮಾತನಾಡಿ, ಶಾಸಕ  ಗಣೇಶ್ ಅವರು ಜನಪರ ಕೆಲಸ ಮಾಡಬೇಕು. ಒಳ್ಳೆಯ ವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು ಎಂದರು.
ಸುದ್ದಿ ಗೋಷ್ಠಿಯಲ್ಲಿ ವಾಲ್ಮೀಕಿ ಮುಖಂಡ ಎನ್. ಬಸಪ್ಪ, ವಾಲ್ಮೀಕಿ ಮಂಜುನಾಥ, ಮೌಲಾಹುಸೇನ್, ಬಳೆ ಮಲ್ಲಿಕಾರ್ಜುನ, ಪಿ. ಶಂಭು ಲಿಂಗ, ಬೆಂಬಲಿಗರು ಇದ್ದರು.