
ಭಾಲ್ಕಿ:ಮೇ.22: ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರಿಗೆ ರಾಜ್ಯದಲ್ಲಿ ನೂತನವಾಗಿ ರಚನೆಯಾದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಗಿರಿ ಸಿಗದಿರುವುದು ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಗಿದೆ.
ಸತತ ನಾಲ್ಕನೆಯ ಬಾರಿಗೆ ಗೆಲುವು ಸಾಧಿಸಿ ಶಾಸಕರಾಗಿರುವ ಈಶ್ವರ ಖಂಡ್ರೆ ಅವರಿಗೆ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಗಿರಿ ಪಕ್ಕಾ ಎಂದು ಹೇಳಲಾಗಿತ್ತು.
ಆದರೆ, ಶನಿವಾರ ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಕೇವಲ ಎಂಟು ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೊನೆಯ ಗಳಿಗೆಯಲ್ಲಿ ಸಚಿವರ ಪಟ್ಟಿಯಿಂದ ಶಾಸಕ ಈಶ್ವರ ಖಂಡ್ರೆ ಅವರ ಹೆಸರು ಕೈತಪ್ಪಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಸುಮಾರು ಎರಡು ವರ್ಷಗಳ ಕಾಲ ಈಶ್ವರ ಖಂಡ್ರೆ ಅವರು ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದರು.
ಹಾಗಾಗಿ ಈ ಬಾರಿಯ ಕಾಂಗ್ರೆಸ್‍ನ ಬಹುಮತದ ಸರಕಾರದಲ್ಲಿ ಶಾಸಕ ಖಂಡ್ರೆ ಅವರ ಪಕ್ಷ ಸಂಘಟನೆ, ನಿಷ್ಠೆ, ಹಿರಿತನಕ್ಕೆ ಸಚಿವಗಿರಿ ಸಿಗವುದು ಗ್ಯಾರಂಟಿ ಎಂದು ಹೇಳಲಾಗಿತ್ತು.
ಹಾಗಾಗಿಯೇ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ತಮ್ಮ ನೆಚ್ಚಿನ ನಾಯಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ವೀಕ್ಷಿಸಲು ನಿರೀಕ್ಷೆಯಂತೆ ಬೆಂಗಳೂರಿಗೆ ದೌಡಾಯಿಸಿದರು.
ಆದರೆ ಕೊನೆಯ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಕಾರ್ಯಕರ್ತರು, ಅಭಿಮಾನಿಗಳಲ್ಲಿ ಭಾರಿ ನಿರಾಸೆ ತರಿಸಿತು.
ಸಮಾಧಾನ ಹೇಳಿದ ಖಂಡ್ರೆ
ಇದೇ ವೇಳೆ ಬೆಂಗಳೂರಿಗೆ ದೌಡಾಯಿಸಿದ ಕ್ಷೇತ್ರದ ವಿವಿಧೆಡೆಯ ಸಾವಿರಾರೂ ಕಾರ್ಯಕರ್ತರು, ಅಭಿಮಾನಿಗಳನ್ನು ಶಾಸಕ ಈಶ್ವರ ಖಂಡ್ರೆ ಅವರು ಸಮಾಧಾನ ಪಡಿಸಿ ಯಾವುದೇ ಕಾರಣಕ್ಕೂ ಕಾರ್ಯಕರ್ತರು ಪ್ರತಿಭಟನೆಯ ಹಾದಿ ತುಳಿಯಬಾರದು. ಮುಂದೆ ಕೆಲ ದಿನಗಳಲ್ಲೇ ಎರಡನೇ ಹಂತದ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುವ ವಿಶ್ವಾಸವಿದೆ ಎಂದು ಕಾರ್ಯಕರ್ತರಿಗೆ ತಿಳಿ ಹೇಳಿದ್ದಾರೆ.