ಶಾಸಕ ಕೆ.ಶಿವನಗೌಡ ನಾಯಕ ಅವರ ಅಮೋಘ ದಾಸೋಹ : ಕೋವಿಡ್ ಲಾಕ್ ಡೌನ್ ಮಾದರಿ ಕಾರ್ಯ

ಕೆಎಸ್‌ಎನ್ ಅನ್ನದಾಸೋಹ : ಮಾನ್ವಿ ತಾಲೂಕಿಗೂ ವಿಸ್ತರಣೆ – ನಿತ್ಯ ೧.೩೬ ಲಕ್ಷ ಊಟದ ಪ್ಯಾಕೇಟ್ ವಿತರಣೆ
ರಾಯಚೂರು.ಜೂ.೦೭- ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿಗೆ ಪ್ರತಿನಿತ್ಯ ಅನ್ನದಾಸೋಹದ ಕಾರ್ಯಕ್ರಮ ಆರಂಭಿಸಿದ ಶಾಸಕ ಕೆ.ಶಿವನಗೌಡ ನಾಯಕ ಅವರು ತಮ್ಮ ದಾಸೋಹ ಕಾರ್ಯವನ್ನು ಇಂದು ಮಾನ್ವಿ ತಾಲೂಕಿಗೂ ವಿಸ್ತರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ದೇವದುರ್ಗ ತಾಲೂಕಿನ ೩೩ ಗ್ರಾ.ಪಂ.ಗಳಲ್ಲಿ ಪ್ರತಿನಿತ್ಯ ೬೬ ಸಾವಿರ ಮತ್ತು ಪಟ್ಟಣದಲ್ಲಿ ೧೦ ಸಾವಿರ ಸೇರಿ ದೇವದುರ್ಗ ತಾಲೂಕಿನಲ್ಲಿ ಒಟ್ಟು ೭೬ ಸಾವಿರ ಊಟದ ಪ್ಯಾಕೇಜ್, ಮೊಟ್ಟೆ ಹಾಗೂ ನೀರಿನ ಬಾಟಲ್ ವಿತರಿಸುವ ಮೂಲಕ ರಾಜ್ಯದಲ್ಲಿಯೇ ಸಂಚಲನ ಮೂಡಿಸಿದ ಅವರು, ಈ ಕಾರ್ಯವನ್ನು ತಮ್ಮ ಹುಟ್ಟೂರನ್ನು ಹೊಂದಿದ ಮಾನ್ವಿ ತಾಲೂಕಿಗೆ ವಿಸ್ತರಿಸುವ ಮೂಲಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಮಾನ್ವಿ ತಾಲೂಕಿನಲ್ಲಿ ಪ್ರತಿನಿತ್ಯ ೬೦ ಸಾವಿರ ಊಟ, ಮೊಟ್ಟೆ ಹಾಗೂ ನೀರು ಪೂರೈಸುವ ಕಾರ್ಯಕ್ಕೆ ಇಂದು ಚಾಲನೆ ನೀಡುವ ಮೂಲಕ ಎರಡನೇ ತಾಲೂಕಿನಲ್ಲೂ ಕೆಎಸ್‌ಎನ್ ಅನ್ನದಾಸೋಹ ಆರಂಭಿಸಿದ್ದಾರೆ. ಶಿವನಗೌಡ ಅವರ ಈ ಕಾರ್ಯವನ್ನು ರಾಜ್ಯದ ಎಲ್ಲಾ ಶಾಸಕರು ಬೆರಗಾಗಿ ನೋಡುವಂತೆ ಮಾಡಿದೆ. ಈಗಾಗಲೇ ಉಸ್ತುವಾರಿ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿಯೇ ಭೋಜನಾ ಸ್ವೀಕರಿಸಿದರು. ನಾಳೆ ಮಧ್ಯಾಹ್ನ ದೇವದುರ್ಗದ ಈ ಅನ್ನದಾಸೋಹ ಕೇಂದ್ರದಲ್ಲಿ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಮಧ್ಯಾಹ್ನದ ಭೋಜನಾ ಸ್ವೀಕರಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ಕಟೀಲು ಅವರು ಸಹ ಜೂ.೯ ರಂದು ಬೆಳಿಗ್ಗೆ ೮.೩೦ ಕ್ಕೆ ಭೇಟಿ ನೀಡಿ ಉಪಹಾರ ಸ್ವೀಕರಿಸಲಿದ್ದಾರೆ.
ದೇವದುರ್ಗ ಮತ್ತು ಮಾನ್ವಿ ತಾಲೂಕುಗಳಲ್ಲಿ ಪ್ರತಿನಿತ್ಯ ೧.೩೬ ಲಕ್ಷ ಊಟದ ಪ್ಯಾಕೇಟ್ ವಿಲೇವಾರಿ ಮಾಡುವ ಬಹುದೊಡ್ಡ ವ್ಯವಸ್ಥೆಯನ್ನು ಶಿವನಗೌಡ ನಾಯಕ ಅವರ ಕೆಎಸ್‌ಎನ್ ಅಭಿಮಾನಿ ಬಳಗ ಹೊಂದಿದೆ. ಇದಲ್ಲದೇ, ಸಿರವಾರ, ಲಿಂಗಸೂಗೂರು ತಾಲೂಕುಗಳಲ್ಲೂ ಅನ್ನದಾಸೋಹ ಕಾರ್ಯಕ್ರಮ ನಿರ್ವಹಿಸಲಾಗುತ್ತಿದೆ.
ಕೊರೊನಾ ಮಹಾಮಾರಿಯ ಕಠಿಣ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ತಾಲೂಕಿಗೆ ಮಾತ್ರವಲ್ಲ, ತಾವು ಹುಟ್ಟಿದ ಗ್ರಾಮವನ್ನು ಹೊಂದಿದ ಮಾನ್ವಿ ತಾಲೂಕು ಹಾಗೂ ಅಕ್ಕಪಕ್ಕದ ತಾಲೂಕುಗಳಿಗೂ ಅನ್ನದಾಸೋಹ ನೀಡುವ ಮೂಲಕ ಶಿವನಗೌಡ ನಾಯಕ ಅವರು ಲಾಕ್ ಡೌನ್‌ನಲ್ಲಿ ಜನರಿಗೆ ನೆರವಾಗಿದ್ದಾರೆ.
ಪ್ರತಿನಿತ್ಯ ಎರಡು ತಾಲೂಕುಗಳಲ್ಲಿ ೧.೩೬ ಲಕ್ಷ ಊಟದ ಪ್ಯಾಕೇಟ್ ಸಿದ್ಧಪಡಿಸಿ, ಇಲ್ಲಿಂದ ಅವುಗಳನ್ನು ಗ್ರಾಮವಾರು ಸಾಗಿಸುವ ಬಹುದೊಡ್ಡ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಕಳೆದ ಸೋಮವಾರದಿಂದ ಆರಂಭಗೊಂಡ ಅನ್ನದಾಸೋಹ ಕಾರ್ಯಕ್ರಮ ಇಂದಿಗೆ ಒಂದು ವಾರ ಕಳೆದಿದೆ. ಕಳೆದ ೮ ದಿನಗಳಿಂದ ಪ್ರತಿನಿತ್ಯ ೭೬ ಸಾವಿರ ಊಟ ಪೂರೈಕೆ ಮಾಡಲಾಗಿದೆ. ಇಲ್ಲಿವರೆಗೆ ೬.೦೮ ಲಕ್ಷ ಊಟ, ಮೊಟ್ಟೆ, ನೀರಿನ ಬಾಟಲ್ ವಿತರಿಸುವ ಮೂಲಕ ಒಬ್ಬ ಶಾಸಕ ಇಷ್ಟೊಂದು ಪ್ರಮಾಣದಲ್ಲಿ ಊಟದ ವ್ಯವಸ್ಥೆ ನಿರ್ವಹಿಸಿದ ಇತಿಹಾಸವನ್ನೇ ಬರೆದಿದ್ದಾರೆ.
ಮಠಗಳು ಅಥವಾ ಇಸ್ಕಾನ್ ಸಂಸ್ಥೆ ಮಾದರಿಯಲ್ಲಿ ಒಬ್ಬ ಶಾಸಕ ಏಕಕಾಲಕ್ಕೆ ಎರಡರಿಂದ ಮೂರು ತಾಲೂಕುಗಳಲ್ಲಿ ಈ ರೀತಿ ಅನ್ನದಾಸೋಹ ನಿರ್ವಹಣೆ ನಾ ಭೂತೋ ನಾ ಭವಿಷ್ಯತಿ ಎನ್ನುವಂತಿದೆ. ಜಿಲ್ಲೆಯ ಇತಿಹಾಸದಲ್ಲಿ ಮಾತ್ರವಲ್ಲ, ರಾಜ್ಯದ ಇತಿಹಾಸದಲ್ಲಿಯೇ ಶಿವನಗೌಡ ಅವರ ಈ ಕಾರ್ಯ ಹಿಂದೆ ನಡೆದಿದೆಯೇ, ಮುಂದೆ ನಡೆಯಬಹುದೇ ಎಂದು ಪ್ರತಿಯೊಬ್ಬರು ಪ್ರಶ್ನಿಸಿಕೊಳ್ಳುವಂತಾಗಿದೆ. ಭಾರೀ ಸಂಖ್ಯೆಯ ಅಭಿಮಾನಿಗಳ ಬಳಗ ಇಲ್ಲದಿದ್ದರೇ, ಈ ರೀತಿಯ ಕಾರ್ಯಕ್ರಮ ನಿರ್ವಹಿಸುವುದು ಅಸಾಧ್ಯ ಎನ್ನುವಂತಹ ಸವಾಲ್ ಶಿವನಗೌಡ ನಾಯಕ ಅವರ ಅಭಿಮಾನಿಗಳಾದ ಕೆಎಸ್‌ಎನ್ ಬಳಗ ನಿರ್ವಹಿಸುತ್ತಿದೆ.
ಕೊರೊನಾ ಸಂದರ್ಭದಲ್ಲಿ ಅನ್ನದಾಸೋಹ ಈ ಕಾರ್ಯಕ್ರಮ ಕೆ.ಶಿವನಗೌಡ ನಾಯಕ ಅವರ ರಾಜಕೀಯ ವರ್ಚಸ್ಸಿನೊಂದಿಗೆ ವೈಯಕ್ತಿಕ ವರ್ಚಸ್ಸು ಹೆಚ್ಚುವಂತೆ ಮಾಡಿದೆ.