ಶಾಸಕ ಕೆ.ಶಿವನಗೌಡ ನಾಯಕ ಅನ್ನಬ್ರಹ್ಮ-ಈಶ್ವರಪ್ಪ

ದೇವದುರ್ಗ.ಜೂ.೦೯-ಕೊರೊನಾ ಲಾಕ್‌ಡೌನ್ ಸಂಕಷ್ಟ ಸಮಯದಲ್ಲಿ ಬಡವರಿಗೆ ನಿತ್ಯ ಅನ್ನದಾನ ಮಾಡುವ ಮೂಲಕ ಶಾಸಕ ಕೆ.ಶಿವನಗೌಡ ನಾಯಕ ಅನ್ನಬ್ರಹ್ಮ ಆಗಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಟ್ಟಣದ ಕೆಎಸ್‌ಎನ್ ಅನ್ನದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಮಂಗಳವಾರ ಮಾತನಾಡಿದರು. ದೇವದುರ್ಗ, ಸಿರವಾರ, ಮಾನ್ವಿ ತಾಲೂಕಿನ ಜನರಿಗೆ ಶಿವನಗೌಡ ನಾಯಕ ಸಂಕಷ್ಟದಲ್ಲಿ ಊಟ ನೀಡುತ್ತಿರುವುದು ಶ್ಲಾಘನೀಯ. ಕೆಲವರು ನೀರು, ಪಡಿತರ ನೀಡಿದರೆ, ಶಿವನಗೌಡ ನಾಯಕ ಹಸಿದ ಹೊಟ್ಟೆಗೆ ಅನ್ನ ನೀಡುತ್ತಿದ್ದಾರೆ.
ಸರ್ಕಾರ ಮಾಡದ ಕೆಲಸವನ್ನು ಕೆಎಸ್‌ಎನ್ ಮಾಡುತ್ತಿದ್ದು, ನಿತ್ಯ ೪೦ಸಾವಿರ ಜನರಿಗೆ ಊಟ ನೀಡುತ್ತಿದ್ದಾರೆ. ಜತೆಗೆ ಕೋವಿಡ್ ಸಂಕಷ್ಟದಲ್ಲಿ ೭೦೦ಜನರಿಗೆ ಉದ್ಯೋಗ ನೀಡಿದ್ದಾರೆ. ಆರ್‌ಎಸ್‌ಎಸ್, ವಿಎಚ್‌ಪಿ, ಸೇವಾ ಭಾರತಿ ಸ್ವಯಂ ಸೇವಕರು ಹಳ್ಳಿಹಳ್ಳಿಗೂ ಜನರ ಕಲ್ಯಾಣ ಮಾಡುತ್ತಿದ್ದಾರೆ. ಹಸಿದವರಿಗೆ ಅನ್ನದ ನೀಡುವ ಮೂಲಕ ಸರ್ಕಾರದ ಕಣ್ಣು ತೆರೆಸಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರ ಕರೊನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿದ್ದು, ನವೆಂಬರ್‌ವರೆಗೆ ೮೦ಕೋಟಿ ಜನರಿಗೆ ಉಚಿತ ಪಡಿತರ, ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಪ್ರತಿಗ್ರಾಪಂಗೆ ೫೦ಸಾವಿರ ರೂ. ನೀಡುತ್ತಿದ್ದು, ಇದರ ಜತೆ ೧೪, ೧೫ನೇ ಹಣಕಾಸು ಯೋಜನೆಯಡಿ ಉಳಿದ ಅನುದಾನ ಬಳಸಿಕೊಳ್ಳಲು ಆದೇಶಿಸಲಾಗಿದೆ. ಪ್ರತಿವಿಧಾನಸಭಾ ಕ್ಷೇತ್ರಕ್ಕೆ ೪-೫ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪಿಎಂಜೆವೈ ಯೋಜನೆಯಡಿ ಕನಿಷ್ಠ ೩೦ಕಿಮೀ ರಸ್ತೆ ಅಭಿವೃದ್ಧಿ ಆದ್ಯತೆ ನೀಡಲಾಗಿದೆ.
ರಾಜ್ಯದಲ್ಲಿ ೬೦೦೯ಗ್ರಾಪಂಗಲ್ಲಿ ೪೮೦೦ಪಿಡಿಒಗಳಿದ್ದು ಕೊರತೆಯಿಲ್ಲ. ನರೇಗಾದಡಿ ಕಳೆದ ವರ್ಷ ೧೩ಕೋಟಿ ಉದ್ಯೋಗ ಸೃಜನೆಗೆ ಕೇಂದ್ರ ಗುರಿ ನೀಡಿತ್ತು. ನಾವು ೧೫ಕೋಟಿ ದಾಟಿದ್ದೇವೆ. ೨೭೫ರೂ. ಕೂಲಿಯಂತೆ ೮೦೦ ಕೋಟಿ ರೂ. ಬಿಡುಗಡೆ ಮಾಡಿತ್ತು. ಈ ವರ್ಷ ೨೯೯ರೂ. ಕೂಲಿ ನಿಗದಿ ಮಾಡಿದ್ದು, ೧೫ಕೋಟಿಗೂ ಅಧಿಕ ಉದ್ಯೋಗ ಸೃಜಿಸುವ ಗುರಿಯಿದೆ. ೧೦೦ದಿನ ಕೆಲಸ ಪೂರ್ಣಗೊಂಡ ನಂತರ ಇನ್ನು ೫೦ ಅಥವಾ ೧೦೦ದಿನ ಕೆಲಸ ನೀಡುವ ಬಗ್ಗೆ ಯೋಚಿಸಲಾಗುವುದು.
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ದೊಂಬರಾಟಕ್ಕೆ ಅವಕಾಶವಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪರ, ವಿರೋಧ ಸಹಿ ಸಂಗ್ರಹ ಮಾಡುವುದು ಪಕ್ಷ ಸಹಿಸದು. ಎಲ್ಲ ಗೊಂದಲಗಳಿಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸ್ಪಷ್ಟನೆ ನೀಡಿದ್ದಾರೆ. ಕೆಲ ಖಾಲಿ ಡಬ್ಬಿಗಳು ಎರಡೂ ಕಡೆ ಶಬ್ಧ ಮಾಡುತ್ತಿವೆ. ಪಕ್ಷದ ಶಿಸ್ತಿನ ಶಾಸಕರಾದ ತುಂಬಿದ ಡಬ್ಬಿಗಳು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿವೆ.
ಅಧಿಕಾರ ನಿರ್ವಹಣೆಗೆ ವಯಸ್ಸಿನ ಮಿತಿಯಿಲ್ಲ. ಕೇರಳದಲ್ಲಿ ೮೮ವರ್ಷದ ಮೆಟ್ರೋಮ್ಯಾನ್ ಇ.ಶ್ರೀಧರನ್‌ರನ್ನು ಸಿಎಂ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದು, ವಯಸ್ಸಿನ ಮಿತಿ ಎನ್ನುವುದು ಇಲ್ಲ. ಮುಖ್ಯಮಂತ್ರಿಬದಲಾವಣೆ ಎನ್ನುವುದು ಸುಳ್ಳು ಎಂದರು.
ಶಾಸಕರಾದ ಕೆ.ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ್ ಇತರರಿದ್ದರು.