ಶಾಸಕ ಕರುಣಾಕರ ರೆಡ್ಡಿ ಕಾಣೆಯಾಗಿದ್ದಾರೆ: ಎಂ.ಟಿ.ಸುಭಾಷ್ ಚಂದ್ರ.

ಹರಪನಹಳ್ಳಿ.ಜೂ.೪; ಹರಪನಹಳ್ಳಿ ತಾಲ್ಲೂಕಿನಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತಾಲ್ಲೂಕಿನ 134 ಹಳ್ಳಿಗಳಿಗೆ ಕೋವಿಡ್ ಮಹಾಮಾರಿ ವಕ್ಕರಿಸಿ ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ. ಈ ಸಂಧರ್ಭದಲ್ಲಿ ಕೇತ್ರದಲ್ಲಿದ್ದು ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವುದು ಬಿಟ್ಟು ಶಾಸಕ ಕರುಣಾಕರ ರೆಡ್ಡಿ ನಾಪತ್ತೆಯಾಗಿದ್ದಾರೆ. ದಯವಿಟ್ಟು ಶಾಸಕರನ್ನು ಹುಡುಕಿಕೊಡಿ ಎಂದು ಪ್ರಗತಿಪರ ಚಿಂತಕ ಹಾಗೂ ಕಾಂಗ್ರೆಸ್  ಮುಖಂಡ ಎಂ.ಟಿ.ಸುಭಾಷ್ ಚಂದ್ರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಕೆಲ ಬಿಜೆಪಿ ಶಾಸಕರುಗಳು ತಮ್ಮ ಜಿವವನ್ನೂ ಲೆಕ್ಕಿಸದೇ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಠಿಕಾಣಿ ಹೂಡಿ ತಮ್ಮ ಕ್ಷೇತ್ರದ ಸೋಕಿತರಲ್ಲಿ ಕರೊನ ಕುರಿತಾಗಿನ ಭಯ ಓಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಮಾನವೀಯ ಕೆಲಸದಲ್ಲಿ ನಿರತರಾಗಿದ್ದಾರೆ. ಜೊತೆಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿನ ಕುಂದು ಕೊರತೆಗಳನ್ನು ಆಲಿಸಿ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಆದರೆ ಹರಪನಹಳ್ಳಿ ಕ್ಷೇತ್ರದ ಜನರ ದೌರ್ಭಾಗ್ಯ ಎಂಬಂತೆ ಶಾಸಕ ಜಿ.ಕರುಣಾಕರ ರೆಡ್ಡಿ ಕಾಟಾಚಾರಕ್ಕೆ ಕೇವಲ ಒಂದೆರಡು ಸಭೆ ಮಾಡಿರುವುದು ಬಿಟ್ಟರೆ, ಕೋವಿಡ್ ಕುರಿತಾಗಿ ಗಂಭೀರ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಇದರಿಂದಾಗಿ ಕ್ಷೇತ್ರದ ಕೋವಿಡ್ ಸೋಂಕಿತ ಚಿಕಿತ್ಸೆಯಲ್ಲಿ ಗುಣಾತ್ಮಕ ಪರಿಣಾಮಗಳು ಕಂಡು ಬರುತ್ತಿಲ್ಲ.ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಕೊರೋನ ಕಾರಣಕ್ಕಾಗಿ ನೇಮಕಗೊಂಡಿರುವ ಗುತ್ತಿಗೆ ಸಿಬ್ಬಂದಿಗಳಿಗೆ ವಿಶೇಷ ವೇತನವೂ ಇಲ್ಲದಂತಾಗಿದೆ. ವೈದ್ಯರ ಕೊರತೆಯಿಂದಾಗಿ ಗ್ರಾಮಾಂತರ ಪ್ರದೇಶದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳು ಸಕಾಲಕ್ಕೆ ಔಷದೋಪಚಾರ ಸಿಗದೇ ಪರದಾಡುವ ಸ್ಥಿತಿ ಇದೆ. ಇದೀಗ ಕೋವಿಡ್ ಸಂಧರ್ಭದಲ್ಲಾದರೂ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹಾಕಿ ತಾಲ್ಲೂಕಿನ ಕೋವಿಡ್ ಸೋಂಕಿತರ ರಕ್ಷಣೆಗೆ ನಿಲ್ಲದೇ ಶಾಸಕ ಕರುಣಾಕರ ರೆಡ್ಡಿ ಕಾಣೆಯಾಗಿರುವುದು ಕೇತ್ರದ ಜನರ ದುರಂತವೆಂದು ಎಂ.ಟಿ‌.ಸುಭಾಷ್ ಚಂದ್ರ ಅಭಿಪ್ರಾಯಪಟ್ಟಿದ್ದಾರೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ರವರು ಹರಪನಹಳ್ಳಿ ತಾಲ್ಲೂಕಿನ ಬಗ್ಗೆ ವಿಶೇಷ ಗಮನ ನೀಡಿ,ತಾಲ್ಲೂಕಿನ ಕೋವಿಡ್ ಸೋಂಕಿತರ ರಕ್ಷಣೆಗೆ ಬೇಕಿರುವ ಅಗತ್ಯ ವೈದ್ಯರನ್ನು ಹಾಗೂ ಆರೋಗ್ಯ ಪರಿಕರಗಳನ್ನು ಪೂರೈಸಬೇಕು ಹಾಗೂ ಇಲ್ಲಿನ ತಮ್ಮದೇ ಪಕ್ಷದ ಶಾಸಕರ ಬೇಜವಬ್ದಾರಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.