ಶಾಸಕ ಕಮರುದ್ದೀನ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಕಾಸರಗೋಡು, ನ.೧೩- ಫ್ಯಾಶನ್ ಗೋಲ್ಡ್ ಜುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್ ರದ್ದುಗೊಳಿಸುವಂತೆ ಮಂಜೇಶ್ವರ ಶಾಸಕ ಎ. ಸಿ ಕಮರುದ್ದೀನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ಬೆಳಗ್ಗೆ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯ ಕೂಡಾ ತಿರಸ್ಕರಿಸಿದ್ತೆ. ಪ್ರಾಥಮಿಕ ಹಂತದಲ್ಲಿ ಜಾಮೀನು ನೀಡುವುದರಿಂದ ತನಿಖೆಗೆ ಅಡಚಣೆಯಾಗಲಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ೭೦ ರಷ್ಟು ಪ್ರಕರಣಗಳು ದಾಖಲಾಗಿರುವುದರಿಂದ ಕಮರುದ್ದೀನ್‌ಗೆ ಪ್ರಥಮ ಹಂತದಲ್ಲಿ ಜಾಮೀನು ನೀಡಿದ್ದಲ್ಲಿ ತನಿಖೆಗೆ ಅಡ್ಡಿಯಾಗಲಿದೆ. ಸಮಾಜದಲ್ಲಿ ಸ್ವಾಧೀನ ಹೊಂದಿರುವ ವ್ಯಕ್ತಿಯಾಗಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕಲು ಹುನ್ನಾರ ನಡೆಯಲಿದೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ಅಂಗೀಕರಿಸಿ ಹೊಸದುರ್ಗ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಚಂದೇರ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಹೊಸದಾಗಿ ೧೧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖಾ ತಂಡ ಬಂಧನವನ್ನು ದೃಢೀಕರಿಸಿದೆ. ೧೨೮ ದೂರುಗಳು ಇದುವರೆಗೆ ಲಭಿಸಿವೆ. ಈ ಪೈಕಿ ೨೫ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಮರುದ್ದೀನ್‌ನನ್ನು ಬಂಧಿಸಲಾಗಿದೆ. ಹೊಸದುರ್ಗ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿರುವುದರಿಂದ ಹೈಕೋರ್ಟ್ ಮೊರೆ ಹೋಗಲು ಕಮರುದ್ದೀನ್ ಪರ ವಕೀಲರು ಮುಂದಾಗುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ ಕಮರುದ್ದೀನ್ ಎರಡನೇ ಆರೋಪಿಯಾಗಿದ್ದು, ಪ್ರಮುಖ ಆರೋಪಿ ಟಿ .ಕೆ ಪೂಕೋಯ ತಂಘಳ್ ತಲೆಮರೆಸಿಕೊಂಡಿದ್ದಾನೆ.