ಶಾಸಕ ಎಸ್‌ಟಿಎಸ್ ಅಡ್ಡಮತದಾನ

ಶಾಸಕ ಎಸ್.ಟಿ. ಸೋಮಶೇಖರ್ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತಿರುವುದು.

ಬೆಂಗಳೂರು, ಫೆ. ೨೭- ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಪರ ಮತ ಹಾಕಿದ್ದಾರೆ ಎಂದು ಹೇಳಲಾಗಿದೆ.ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಡ್ಡ ಮತದಾನವಾಗುವ ವಿಶ್ವಾಸ ಹೊಂದಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸೋಮಶೇಖರ್ ಅವರ ಅಡ್ಡಮತದಾನ ಒಂದು ರೀತಿ ಆಘಾತ ತಂದಿದೆ.ಕಾಂಗ್ರೆಸ್ ಅಭ್ಯರ್ಥಿಪರ ಮತ ಹಾಕಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಎಸ್.ಟಿ. ಸೋಮಶೇಖರ್ ಅವರು, ನಾನು ನನ್ನ ಆತ್ಮಸಾಕ್ಷಿಯಂತೆ ಮತ ಚಲಾಯಿಸಿದ್ದೇನೆ. ಯಾರಿಗೆ ತೋರಿಸಬೇಕೋ ಅವರಿಗೆ ತೋರಿಸಿಯೇ ಮತ ಹಾಕಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ-ಜೆಡಿಎಸ್ ನಾಯಕರಿಗೆ ಸಡ್ಡು ಹೊಡೆದಿದ್ದಾರೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆದಿದ್ದು, ಐವರ ಸ್ಪರ್ಧೆಯಿಂದ ಚುನಾವಣಾ ಕಣ ರಂಗೇರಿತ್ತು. ಅಡ್ಡಮತದಾನದ ಭೀತಿ, ಮೂರು ಪಕ್ಷಗಳಿಗೆ ಇತ್ತಾದರೂ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಯಾರೂ ಅಡ್ಡ ಮತದಾನ ಮಾಡುವ ಸಾಹಸ ಮಾಡಿಲ್ಲ. ಆದರೆ ಬಿಜೆಪಿಯ ಎಸ್.ಟಿ. ಸೋಮಶೇಖರ್, ಅಡ್ಡ ಮತದಾನ ಮಾಡುವ ಮೂಲಕ ದೋಸ್ತಿ ಪಕ್ಷಗಳಿಗೆ ಕೈ ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲೇ ಮುಂದಿನ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಸುಳಿವನ್ನು ಸೋಮಶೇಖರ್ ನೀಡಿದ್ದಾರೆ.
ಸೋಮಶೇಖರ್ ವಿರುದ್ಧ ಕ್ರಮ
ರಾಜ್ಯಸಭಾ ಚುನಾವಣೆಯಲ್ಲಿ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿರುವುದನ್ನು ಖಚಿತಪಡಿಸಿರುವ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಸೋಮಶೇಖರ್ ನಡೆ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಅವರ ವಿರುದ್ಧ ಸದಸ್ಯತ್ವ ಅನರ್ಹಗೊಳಿಸುವಂತೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡುವುದಾಗಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನಾಯಕರ ಆಕ್ರೋಶ
ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸೋಮಶೇಖರ್ ವಿರುದ್ಧ ಕೆಂಡಮಂಡಲವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಶಾಸಕ ಸೋಮಶೇಖರ್ ಅವರು ಅಡ್ಡ ಮತದಾನ ಮಾಡಿರುವುದು ಬಿಜೆಪಿ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿಧಾನಸೌಧದಲ್ಲಿರುವ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರುಗಳು ಸಭೆ ನಡೆಸಿ ಚರ್ಚೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗಿಯಾಗಿ ಸೋಮಶೇಖರ್ ವಿರುದ್ಧ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂದು ಚರ್ಚಿಸಿದರು ಎನ್ನಲಾಗಿದೆ.
ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವ ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೇ, ಇಲ್ಲವೆ ಅವರನ್ನು ಅಮಾನತು ಮಾಡಿ ಅವರ ವಿರುದ್ಧ ಸಭಾಧ್ಯಕ್ಷರಿಗೆ ದೂರು ನೀಡಿ ಅವರ ಸದಸ್ಯತ್ವನ್ನು ಅನರ್ಹಗೊಳಿಸುವ ಕಾನೂನು ಪ್ರಕ್ರಿಯೆಗಳನ್ನು ನಡೆಸುವ ಬಗ್ಗೆಯೂ ನಾಯಕರುಗಳು ಚರ್ಚೆ ನಡೆಸಿದ್ದಾರೆ.

ಎಸ್‌ಟಿಎಸ್‌ಗೆ ಸಿಎಂ ಥ್ಯಾಂಕ್ಸ್
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಪಕ್ಷದ ಪರ ಮತ ಹಾಕಿರುವ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಧನ್ಯವಾದ ಹೇಳಿದ್ದಾರೆ.ಬಿಜೆಪಿ ಶಾಸಕ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಪರ ಮತ ಹಾಕಿರುವ ಬಗ್ಗೆ ಸುದ್ದಿಗಾರರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದಾಗ, ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರೆ ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು

ಮಧ್ಯಾಹ್ನವಾದರೂ ಮತಗಟ್ಟೆಯತ್ತ ಸುಳಿಯದ ಹೆಬ್ಬಾರ್
ಬಿಜೆಪಿ ಶಾಸಕ ಸೋಮಶೇಖರ್ ಅವರಂತೆ ಬಿಜೆಪಿಗೆ ಸಡ್ಡು ಹೊಡೆದು ಕಾಂಗ್ರೆಸ್ ನಾಯಕರ ಜತೆ ಗುರುತಿಸಿಕೊಂಡಿರುವ ಬಿಜೆಪಿಯ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಸಹ ಕಾಂಗ್ರೆಸ್ ಅಭ್ಯರ್ಥಿಪರ ಮತ ಹಾಕುತ್ತಾರೆ ಎಂದು ಹೇಳಲಾಗಿತ್ತಾದರೂ ಮಧ್ಯಾಹ್ನ ೨ ಗಂಟೆಯಾದರೂ ಶಿವರಾಮ್ ಹೆಬ್ಬಾರ್ ಮತಗಟ್ಟೆಯತ್ತ ಸುಳಿಯಲಿಲ್ಲ.
ಮತದಾನಕ್ಕೆ ನಾಲ್ಕು ಗಂಟೆವರೆಗೂ ಅವಕಾಶವಿದ್ದು ಶಿವರಾಮ್ ಹೆಬ್ಬಾರ್ ಸಹ ಸೋಮಶೇಖರ್ ಹಾದಿಯನ್ನೇ ತುಳಿಯುವರೇ ಎಂಬುದು ಕುತೂಹಲ ಮೂಡಿಸಿದೆ.
ಶಾಸಕರ ಭವನದಲ್ಲಿರುವ ಶಿವರಾಂ ಹೆಬ್ಬಾರ್ ಅವರ ಕಚೇರಿಯ ಬಾಗಿಲ ಮೇಲೆ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವ ವಿಪ್‌ನ್ನು ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅಂಟಿಸಿ ವಿಪ್‌ನ್ನು ಜಾರಿ ಮಾಡಿದ್ದಾರೆ.