ಕೋಲಾರ,ಸೆ,೨೬- ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ್ದು ಜನತಾದರ್ಶನವಲ್ಲ ಅದು ಕಾಂಗ್ರೆಸ್ ದರ್ಶನ, ಕೇವಲ ಒಂದೂವರೆ ಗಂಟೆಯಲ್ಲಿ ಮುಗಿಸಿದ ಈ ಕಾರ್ಯಕ್ರಮದಲ್ಲಿ ಜನರ ಒಂದೇ ಒಂದು ಸಮಸ್ಯೆಗೂ ಪರಿಹಾರ ಸಿಗಲಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಜನತಾದರ್ಶನ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ತಮ್ಮ ನಡುವೆ ನಡೆದ ಮಾತಿನ ಚಕಮಕಿಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಎಲ್ಲೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೆಸರು ಪ್ರಸ್ತಾಪಿಸಲಿಲ್ಲ ಆದರೆ ಇದ್ದಕ್ಕಿದ್ದಂತೆ ಶಾಸಕರು ಅವಾಚ್ಯಪದಗಳೊಂದಿಗೆ ವಾಗ್ವಾದಕ್ಕೆ ನಿಂತಿದ್ದು ಕಂಡಾಗ ‘ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡರಂತೆ’ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
ತಾವು ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ಅನ್ನದಾತರ ಮಾವು,ತೆಂಗು ಮತ್ತಿತರ ಬೆಳೆಗಳನ್ನು ನಾಶಪಡಿಸಿದ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ದ ಮನವಿ ಸಲ್ಲಿಸಲು ಬಂದಿದ್ದಾಗಿ ತಿಳಿಸಿದರು.
ಜನಪ್ರತಿನಿಧಿಗಳಿಗೊಂದು ನೀತಿ ಬಡ ರೈತರಿಗೊಂದು ನೀತಿಯೇ ಎಂದು ಪ್ರಶ್ನಿಸಿ, ನೂರಾರು ಎಕರೆ ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಯಾವ ಪುರುಷಾರ್ಥಕ್ಕಾಗಿ ಜನತಾ ದರ್ಶನ ಮಾಡುತ್ತೀರಿ ಎಂದು ಪ್ರಶ್ನಿಸಿದ್ದೇನೆ ಎಂದರು.
ನಾವು ಯಾರೂ ಭೂಕಬಳಿಕೆ ಮಾಡಿಲ್ಲ, ಅಧಿಕಾರಿ,ಜನರಿಗೆ ಬೆದರಿಕೆ ಹಾಕಿಲ್ಲ, ೬೦ ವರ್ಷಗಳಿಂದ ಸಾಗುವಳಿ ಚೀಟಿ, ಪಹಣಿ, ಮ್ಯೂಟೇಷನ್ ಪಡೆದಿದ್ದ ಶ್ರೀನಿವಾಸಪುರ ರೈತರ ಒತ್ತುವರಿ ತೆರವು ಮಾಡಿ ಅನ್ನದಾತರ ಮೇಲೆ ದಬ್ಬಾಳಿಕೆ ಮಾಡಿರುವ ಸರ್ಕಾರ ಮತ್ತು ಅಧಿಕಾರಿಗಳಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒತ್ತುವರಿ ಮಾಡಿಕೊಂಡಿರುವ ಗುಂಡುತೋಪು, ಸರ್ಕಾರಿ ಜಮೀನು, ಕೆರೆ ಕಬಳಿಕೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಶೇ.೪೦ ಪರ್ಸೆಂಟ್ ಕಮಿಷನ್ ಎಂದು ಆರೋಪಿಸಿ ತನಿಖೆ ನಡೆಸುತ್ತಿದ್ದಾರೆ ಆದರೆ ಈ ಸರ್ಕಾರ ಶೇ.೫೦ ಪರ್ಸೆಂಟ್ ಸರ್ಕಾರ ಇದರ ತನಿಖೆಯೂ ಮಾಡಲಿ ಎಂದು ಆಗ್ರಹಿಸಿದ ಅವರು, ಶಾಸಕರ ಒತ್ತುವರಿ ತೆರವು ಹಾಗೂ ಶ್ರೀನಿವಾಸಪುರ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶಾಂತರೀತಿಯಿಂದ ವಿಧಾನಸೌಧ ಚಲೋ ನಡೆಸುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಪ್ರವೀಣ್‌ಗೌಡ, ದಿಶಾಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಯುವಮೋರ್ಚಾದ ಬಾಲಾಜಿ, ಮುಖಂಡರಾದ ವೆಂಕಟೇಶ್ ಮತ್ತಿತರ ಮುಖಂಡರು ಹಾಜರಿದ್ದರು.