ಶಾಸಕ ಎಂ.ವೈ. ಪಾಟೀಲ್ ಮಧ್ಯಸ್ಥಿಕೆ : ಮುಖ್ಯಾಧಿಕಾರಿ ಪಂಕಜಾ ರಾವೂರ್ ವಿರುದ್ಧ ಕಾಂಗ್ರೆಸ್ ಪುರಸಭೆ ಸದಸ್ಯರ ಬಂಡಾಯ ಠುಸ್..!

(ಸಂಜೆವಾಣಿ ವಾರ್ತೆ)
ಅಫಜಲಪುರ :ಮಾ.17: ಮೌಲ್ಯಾಧಾರಿತ ಹಿರಿಯ ಮುತ್ಸದ್ದಿ ರಾಜಕಾರಣಿ ಶಾಸಕ ಎಂ.ವೈ. ಪಾಟೀಲ್ ಅವರು ಎಂತಹ ವಿವಾದಗಳಿದ್ದರೂ ಅದನ್ನು ಅತ್ಯಂತ ಸುಲಭವಾಗಿ ಪರಿಹರಿಸುತ್ತಾರೆ ಎನ್ನುವುದಕ್ಕೆ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಪಂಕಜಾ ರಾವೂರ್ ಹಾಗೂ ಆಡಳಿತ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರ ನಡುವಿನ ವಿವಾದವನ್ನು ಇತ್ಯರ್ಥಗೊಳಿಸಿದ್ದು ಒಂದು ತಾಜಾ ನಿದರ್ಶನವಾಗಿದೆ.
ಪುರಸಭೆ ಮುಖ್ಯಾಧಿಕಾರಿ ಪಂಕಜಾ ರಾವೂರ್ ಅವರು ಏಕಪಕ್ಷೀಯ, ಸರ್ವಾಧಿಕಾರಿ ನೀತಿಯನ್ನು ಅನುಸರಿಸುತ್ತಾರೆ. ಪುರಸಭೆ ಸದಸ್ಯರ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ಕೊಡುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮತದಾರರು ನಮ್ಮ ಮೇಲೆ ಕೋಪಗೊಂಡಿದ್ದಾರೆ. ಆದ್ದರಿಂದ ಮುಖ್ಯಾಧಿಕಾರಿ ಹಠಾವೋ, ಪುರಸಭೆ ಬಚಾವೋ ಎಂಬ ಚಳುವಳಿಯನ್ನು ಜಿಲ್ಲಾಧಿಕಾರಿಗಳ ಬಳಿಗೆ ನಿಯೋಗ ತೆಗೆದುಕೊಂಡು ಹೋಗುವ ಮೂಲಕ ಹಮ್ಮಿಕೊಳ್ಳಲು ಕಾಂಗ್ರೆಸ್ ಪುರಸಭೆಯ ಸದಸ್ಯರು ಸರ್ವಾನುಮತದ ನಿರ್ಣಯ ಅಂಗೀಕರಿಸಿದ್ದರು. ಅಲ್ಲದೇ ಅದಕ್ಕಿಂತ ಮುಂಚೆ ಪುರಸಭೆಯಲ್ಲಿನ ಬಜೆಟ್ ಸಭೆಯನ್ನೂ ಸಹ ಬಹಿಷ್ಕರಿಸಿದ್ದರು. ಜೊತೆಗೆ ಕಾಂಗ್ರೆಸ್ ಪುರಸಭೆ ಸದಸ್ಯರು ಸಾಮೂಹಿಕ ಸುದ್ದಿಗೋಷ್ಠಿ ಮಾಡಿ ಮುಖ್ಯಾಧಿಕಾರಿಗಳನ್ನು ಪದಚ್ಯುತಿಗೊಳಿಸುವ ಕಾರ್ಯಾಚರಣೆಯನ್ನು ಸಹ ಆರಂಭಿಸಿದ್ದರು. ಅವರ ಯಾವುದೇ ತೀರ್ಮಾನಗಳು ಕ್ಷಣಿಕವಾಗುವ ರೀತಿಯಲ್ಲಿ ಶಾಸಕ ಎಂ.ವೈ. ಪಾಟೀಲ್ ಅವರು ಗೌಪ್ಯ ಸ್ಥಳದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಪುರಸಭೆ ಕಾಂಗ್ರೆಸ್ ಸದಸ್ಯರನ್ನು ಮುಖಾಮುಖಿಯಾಗಿ ಸಭೆ ಮಾಡಿ ವಿವಾದವನ್ನು ಇತ್ಯರ್ಥಗೊಳಿಸಿದ್ದಾರೆ.
ಮುಖ್ಯಾಧಿಕಾರಿಗಳು ವೈಯಕ್ತಿಕವಾಗಿ ದುಂದು ವೆಚ್ಚ ಮಾಡುತ್ತಿರುವುದು ಸೇರಿದಂತೆ ಅವರ ವಿರುದ್ಧ ಎಲ್ಲ ಆರೋಪಗಳ ಕುರಿತು ಕಾಂಗ್ರೆಸ್ ಪುರಸಭೆ ಸದಸ್ಯರು ದೂರವಾಣಿ ಮೂಲಕ ಶಾಸಕ ಎಂ.ವೈ. ಪಾಟೀಲ್ ಅವರ ಗಮನಕ್ಕೆ ತಂದಿದ್ದರು. ಆಗ ಶಾಸಕರು ನಾನು ಈಗಾಗಲೇ ಪತ್ರಿಕೆಗಳ ಮೂಲಕ ಎಲ್ಲ ವಿಷಯಗಳನ್ನು ಮನಗಂಡಿದ್ದೇನೆ. ಚುನಾವಣೆಯ ಹೊಸ್ತಿಲಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ನಾನು ಪಟ್ಟಣಕ್ಕೆ ಬರುವೆ. ನಿಮ್ಮನ್ನೂ ಸೇರಿದಂತೆ ಮುಖ್ಯಾಧಿಕಾರಿಗಳನ್ನು ಕರೆಸಿ ಸಂಧಾನ ಮಾಡುವೆ ಎಂದು ತಿಳಿಹೇಳಿದರು.
ಆದಾಗ್ಯೂ, ಇನ್ನುಳಿದ ಕೆಲ ಸದಸ್ಯರು ಇನ್ನು ಶಾಸಕರು ಬರುತ್ತಾರೆ ಎಂದು ತಿಳಿದು ನಮ್ಮ ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾವೇ ಕಲಬುರ್ಗಿಗೆ ಹೋಗಿ ಪುರಸಭೆಯ ಜಿಲ್ಲಾ ಯೋಜನಾ ನಿರ್ದೇಶಕರು, ನಗರ ಕೋಶಾಧಿಕಾರಿಗಳನ್ನು ಭೇಟಿ ಮಾಡಿ ನಂತರ ಜಿಲ್ಲಾಧಿಕಾರಿಗಳಿಗೆ ಭೇಟಿಯಾಗೋಣ. ಪುರಸಭೆ ಮುಖ್ಯಾಧಿಕಾರಿಗಳನ್ನು ಪದಚ್ಯುತಗೊಳಿಸೋಣ ಎಂದು ನಿರ್ಧರಿಸಿದರು. ಅದರಂತೆ 17 ಕಾಂಗ್ರೆಸ್ ಪುರಸಭೆ ಸದಸ್ಯರು ಕಲಬುರ್ಗಿಗೆ ಹೊರಟರು. ಅತ್ತ ಶಾಸಕ ಎಂ.ವೈ. ಪಾಟೀಲ್ ಅವರು ಪಟ್ಟಣದತ್ತ ಮುಖಮಾಡಿ ಹೊರಟರು.
ಮಾರ್ಗ ಮಧ್ಯೆ ಶರಣಸಿರಸಗಿ ಗ್ರಾಮದ ಹತ್ತಿರ ಶಾಸಕರು ಹಾಗೂ ಪುರಸಭೆ ಸದಸ್ಯರು ಮುಖಾಮುಖಿಯಾದರು. ಹಾದಿ, ಬೀದಿಯಲ್ಲಿ ಚರ್ಚೆ ಬೇಡ. ಕಲಬುರ್ಗಿಗೆ ಹೋಗೋಣ. ಮುಖ್ಯಾಧಿಕಾರಿಗಳನ್ನು ಕರೆಯಿಸಿ ಮಾತನಾಡೋಣ ಎಂದು ಶಾಸಕರು ಬಂಡಾಯ ಸದಸ್ಯರಿಗೆ ಮನವರಿಕೆ ಮಾಡಿದರು.
ಅದೇ ರೀತಿ ಕಲಬುರ್ಗಿಯಲ್ಲಿ ಪುರಸಭೆ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳ ನಡುವೆ ಸಭೆಯೂ ಸಹ ಶಾಸಕ ಎಂ.ವೈ. ಪಾಟೀಲ್ ಅವರ ಮಧ್ಯಸ್ಥಿಕೆಯಲ್ಲಿ ಜರುಗಿತು. ನೀವು ಆಡಳಿತ ಜವಾಬ್ದಾರಿ ಹೊತ್ತವರು. ನೀವು ಬಿಜೆಪಿ ಸದಸ್ಯರೂ ಸೇರಿದಂತೆ ಪಕ್ಷ ಬೇಧ ಮರೆತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ವಾಡ್ರ್ಗಳಲ್ಲಿ ಕುಡಿಯುವ ನೀರು, ವಿದ್ಯುತ್, ಚರಂಡಿ ಸ್ವಚ್ಛತೆ, ಕಸ ವಿಲೇವಾರಿ ಮುಂತಾದವುಗಳ ಕುರಿತು ಪುರಸಭೆ ಸದಸ್ಯರು ಕೇಳುತ್ತಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ಕೇಳಿದರೆ ಅದನ್ನೇ ವಿಕೋಪಕ್ಕೆ ತೆಗೆದುಕೊಂಡು ಹೋದರೆ ನಾನಾ, ನೀನಾ ಎಂದು ಜಿದ್ದಿಗೆ ಬಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ?, ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಮುಖ್ಯಾಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು ಎನ್ನಲಾಗಿದೆ.
ನಾನು ವಿರೋಧ ಪಕ್ಷದ ಶಾಸಕನಾಗಿ ಬಿಜೆಪಿ ಸರ್ಕಾರದೊಂದಿಗೆ ಗುದ್ದಾಡಿ, ಮನವೊಲಿಸಿ ಪಟ್ಟಣಕ್ಕೆ ಅನೇಕ ಅನುದಾನಗಳನ್ನು ತಂದಿದ್ದು, ಇಂತಹ ಸಂದರ್ಭದಲ್ಲಿ ಈ ರೀತಿ ಮನಸ್ತಾಪ ಮಾಡಿಕೊಳ್ಳುವುದು ಅಭಿವೃದ್ಧಿಗೆ ಮಾರಕವಾಗುತ್ತದೆ. ಇದು ನನಗೆ ವೈಯಕ್ತಿಕವಾಗಿ ನೋವು ತರಿಸಿದೆ. ಬೇಸಿಗೆ ಬರುತ್ತಿದೆ. ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಬರುವ ಮಾರ್ಚ್ 20 ರಂದು ಸೋಮವಾರ ಪುರಸಭೆಯ ಬಜೆಟ್ ಮಂಡನೆ ಲೇಖಾನುದಾನವಾಗಲಿ, ಎಲ್ಲ ಸದಸ್ಯರು ಸಭೆಗೆ ಹಾಜರಾಗುತ್ತಾರೆ ಎಂದು ಶಾಸಕರು ಹೇಳಿದರು ಎಂದು ತಿಳಿದು ಬಂದಿದೆ.
ಪುರಸಭೆ ಅಧ್ಯಕ್ಷೆ ಶ್ರೀಮತಿ ಶಹದಾಬೇಗಂ ರೌಫ್ ಅವರ ಮೇಲೆ ಸ್ವಪಕ್ಷೀಯ ಸದಸ್ಯರು ಶಾಸಕರ ಎದುರೆ ಬಜೆಟ್ ಮಂಡನೆ ಸಭೆ ಆ ದಿನಾಂಕದಂದು ಕರೆಯಬೇಡಿ. ಅಂದು ಮದುವೆ ಸಮಾರಂಭಗಳು ಇತರೆ ಕಾರ್ಯಕ್ರಮಗಳು ಇವೆ. ಬಜೆಟ್ ಸಭೆ ಮುಂದೂಡಿ ಎಂದು ಹೇಳಿದಾಗ ಅವರ ಮಾತಿಗೆ ಓಗೊಡದೇ ಅಧ್ಯಕ್ಷರು ಏಕ ಪಕ್ಷೀಯ ನಿರ್ಣಯ ತೆಗೆದುಕೊಂಡು ಮುಖ್ಯಾಧಿಕಾರಿಗಳ ಮುಖಾಂತರ ಸಭೆ ಕರೆದಿದ್ದಾರೆ. ಮುಖ್ಯಾಧಿಕಾರಿಗಳ ಚೆಂಬರ್‍ದಲ್ಲಿ ಕುಳಿತು ಅಧ್ಯಕ್ಷರ ಪತಿ ರೌಫ್ ಪಟೇಲ್ ಅವರು ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನಾವು ಜನರಿಂದ ಆಯ್ಕೆಯಾದವರು. ಅಧ್ಯಕ್ಷರ ಪತಿಯ ಆಡಳಿತ ಹಸ್ತಕ್ಷೇಪದ ಕುರಿತು ಶಾಸಕರ ಮುಂದೆ ಅಳಲು ತೋಡಿಕೊಂಡರು ಎನ್ನಲಾಗಿದೆ.
ಶಾಸಕರ ಮಾತಿಗೆ ಒಂದು ರೀತಿಯಲ್ಲಿ ಮೆತ್ತಗಾದ ಪುರಸಭೆ ಮುಖ್ಯಾಧಿಕಾರಿ ಪಂಕಜಾ ರಾವೂರ್ ಅವರು, ತೆರಿಗೆ ವಸೂಲಾತಿಯಿಂದ ಆದಾಯ ಕಡಿಮೆಯಾಗಿದೆ. ಖರ್ಚು, ವೆಚ್ಚದಲ್ಲಿ ಏನಾದರೂ ಏರುಪೇರು ಆದರೆ ಅದಕ್ಕೆ ಉತ್ತರದಾಯಕಳು ನಾನು. ಕಾನೂನು ಅಡಿಯಲ್ಲಿ ಬರುವ ಸದಸ್ಯರ ವಾಡ್ರ್ಗಳಲ್ಲಿ ಕೈಯಿಂದ ಹಣ ಹಾಕಿ ಕಾಮಗಾರಿಗಳು ಹಾಗೂ ಇನ್ನಿತರ ಕೆಲಸಗಳನ್ನು ಮಾಡಿಸಿರುವ ಬಿಲ್‍ಗಳ ಮೊತ್ತವನ್ನು ಹಂತ, ಹಂತವಾಗಿ ಪಾವತಿಸುವೆ. ವಾರ್ಡಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವೆ. ಮುಂದೆ ಇಂತಹ ಘಟನೆ ಸಂಭವಿಸದಂತೆ ಎಚ್ಚರವಹಿಸುತ್ತೇನೆ ಎಂದು ಹೇಳಿದರು.
ನಾನೊಬ್ಬಳು ಮಹಿಳೆ. ನನ್ನ ಕುಟುಂಬದಲ್ಲಿ ಇನ್ನೂ ಚಿಕ್ಕ ಮಕ್ಕಳು ಇರುವುದರಿಂದ ಕುಟುಂಬ ನಿರ್ವಹಣೆಗೆ ನಾನು ಕಾರ್ಯನಿರ್ವಹಿಸಲು ಕೇಂದ್ರ ಸ್ಥಾನದಲ್ಲಿರಲು ಸ್ವಲ್ಪ ಅಡಚಣೆ ಆಗುತ್ತದೆ. ಅನುಕೂಲ ಮಾಡಿಕೊಡಿ ಎಂದು ಶಾಸಕರಿಗೆ ಪಂಕಜಾ ರಾವೂರ್ ಅವರು ಕೋರಿದಾಗ, ಹಾಗಾದರೆ ತಾಂತ್ರಿಕ ಕಿರಿಯ ಅಭಿಯಂತರರನ್ನು ಕೇಂದ್ರ ಸ್ಥಾನದಲ್ಲಿರಲು ತಿಳಿಸಿ ಎಂದು ಶಾಸಕರು ಸಲಹೆ ಮಾಡಿದರು. ಏನೇ ಆದರೂ ಪುರಸಭೆಯ ಅತ್ಯಂತ ದೊಡ್ಡ ವಿವಾದವನ್ನು ತೆರೆಮರೆಯಲ್ಲಿಯೇ ಶಾಸಕರು ಪರಿಹರಿಸುವ ಮೂಲಕ ಪುರಸಭೆ ಮುಖ್ಯಾಧಿಕಾರಿ ಹಠಾವೋ ಚಳುವಳಿಯನ್ನು ಠುಸ್ಸಾಗಿಸಿದ್ದಾರೆ.