ಶಾಸಕ ಈಶ್ವರ ಖಂಡ್ರೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ

ಭಾಲ್ಕಿ:ಮೇ.23:ಲಿಂಗಾಯತ ಸಮಾಜದ ಪ್ರಭಾವಿ ಮುಖಂಡರು, ಅಖಿಲ ಭಾರತ ವೀರಶೈವ ಮಹಾ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಈಶ್ವರ ಖಂಡ್ರೆ ಅವರಿಗೆ
ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ಒತ್ತಾಯಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನ ಪಡೆದಿದೆ.
ಅವುಗಳಲ್ಲಿ 39 ಸ್ಥಾನಗಳಲ್ಲಿ ಲಿಂಗಾಯತ ಸಮುದಾಯದ ಶಾಸಕರು ಆಯ್ಕೆಯಾಗಿದ್ದಾರೆ.

ಲಿಂಗಾಯತ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸಿ ಗೆಲ್ಲಿಸಿರುವುದರಿಂದ ಉಪ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯತ ಸಮುದಾಯದ ಈಶ್ವರ ಖಂಡ್ರೆ ಅವರಿಗೆ ನೀಡಬೇಕು.

ಮಾಜಿ ಸಚಿವರು, ಹಿರಿಯರು ಆಗಿರುವ ಈಶ್ವರ ಖಂಡ್ರೆ ಅವರು ಭಾಲ್ಕಿ ಕ್ಷೇತ್ರದಿಂದ ಸತತವಾಗಿ ನಾಲ್ಕನೇ ಬಾರಿ ಅತ್ಯಧಿಕ ಮತಗಳಿಂದ ಶಾಸಕರಾಗಿ ಆಯ್ಕೆ ಯಾಗಿದ್ದಾರೆ. ಇವರು ಲಿಂಗಾಯತರ ಜೊತೆ ಇತರ ಸಮಾಜದವರನ್ನು
ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ನಂತರ ಯಾವುದೇ ಲಿಂಗಾಯತ ವ್ಯಕ್ತಿಗೆ ಉನ್ನತ ಸ್ಥಾನ ದೊರೆತಿಲ್ಲ. ಹಾಗಾಗಿ, ಈ ಸಾರಿ ತಪ್ಪದೇ ಈಶ್ವರ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂದು ತಾಲ್ಲೂಕಿನ ವಿವಿಧ ಗ್ರಾಮಗಳ
ಪ್ರಮುಖರಾದ ಶಿವಕುಮಾರ ಪಾಟೀಲ ತೇಗಂಪೂರ, ಪವನ ಬಿರಾದಾರ ಕದಲಾಬಾದ್,
ರಾಜಕುಮಾರ ನಾಯಿಕೋಡೆ,
ಬಸವರಾಜ ಕರೆಪ್ಪನೋರ್,
ವಕೀಲ ಬಾಪುರಾವ್ ದೇಶಮುಖ ಬಾಳೂರ, ಜಗನ್ನಾಥ ಕರಂಜೆ, ಮಹಾಂತೇಶ ಡೊಂಗರಗಿ, ಓಂಕಾರ ಪಾಟೀಲ, ರಾಜಕುಮಾರ ಪಾಟೀಲ ಚಂದಾಪೂರ, ಸತೀಶ ದೇಶಮುಖ, ಮಲ್ಲಿಕಾರ್ಜುನ ಬಿರಾದಾರ, ಚಂದ್ರಕಾಂತ ಡೊಂಗರಗಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.