ಶಾಸಕಿ ಕನ್ನಿಜ ಫಾತಿಮಾ ಇಸ್ಲಾಂರ ಆಪ್ತ ಫಾತೆಖಾನಿ ಹಾಗೂ ಜಹಾಗೀರದಾರ ಮನೆ,ಕಚೇರಿಗಳ ಮೇಲೆ ಐಟಿ ದಾಳಿ

ಕಲಬುರಗಿ.ಮೇ.06:ಉತ್ತರ ಕ್ಷೇತ್ರದ ಶಾಸಕಿ ಕನ್ನಿಜ ಫಾತಿಮಾ ಇಸ್ಲಾಂ ಅವರ ಆಪ್ತರಾಗಿರುವ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ವಾಹೀದ್‍ಅಲಿ ಫಾತೆಖಾನಿ ಹಾಗೂ ಕಾಂಗ್ರೆಸ್ ಮುಖಂಡ ಮಹ್ಮದ ಮಸಿಯುದ್ದೀನ್ ಜಹಾಗೀರದಾರ ಅವರ ಮನೆ ಮತ್ತು ಅವರ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಇನ್ನಷ್ಟು ಜನರ ಮನೆಗಳ ಮೇಲೆಯೂ ದಾಳಿ ನಡೆಸುವ ಸಾಧ್ಯತೆ ಇದೆ.
ನಗರದ ದರ್ಗಾ ಪ್ರದೇಶದ ನೂರಬಾಗ್‍ದಲ್ಲಿರುವ ಫಾತೆಖಾನಿ ಹಾಗೂ ಜಹಾಗೀರದಾರ ಅವರ ಬಂಗಲೆಗಳ ಮೇಲೆ ಶನಿವಾರ ಮಧ್ಯಾಹ್ನ 2-30 ಗಂಟೆಗೆ ಬೆಂಗಳೂರು ಹಾಗೂ ಹೈದರಾಬಾದನಿಂದ ಆಗಮಿಸಿದ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದರು. ಅಲ್ಲದೆ ಮನೆಗಳಲ್ಲಿ ಹಾಗೂ ಅವರ ಉದ್ಯೋಗಗಳಿಗೆ ಸಂಬಂಧಿಸಿದ ಕಚೇರಿಗಳಲ್ಲಿ ಸಹ ಶೋಧ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶೋಧ ಕಾಲಕ್ಕೆ ನಗದು ಹಣ ಸಹ ಪತ್ತೆಯಾಗಿದೆ. ಹಾಗೂ ಹಲವು ದಾಖಲೆಗಳು ಸಿಕ್ಕಿವೆ.
ಸಂಜೆಯವರೆಗೂ ಐಟಿ ದಾಳಿಯಾಗಿರುವ ಮಾಹಿತಿ ಯಾರಿಗೂ ಗೊತ್ತಾಗಿರಲಿಲ್ಲ. ಬಳಿಕ ದಾಳಿಯಾಗಿರುವ ಕುರಿತು ಮಾಹಿತಿ ಹೊರ ಬಿದ್ದಿದೆ. ವಿಧಾನ ಸಭೆ ಚುನಾವಣೆಯ ಹೊತ್ತಿನಲ್ಲಿಯೇ ಐಟಿ ದಾಳಿ ನಡೆದಿದೆ. ಇವರಿಬ್ಬರು ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಕನ್ನಿಜಫಾತಿಮಾ ಅವರ ಆಪ್ತರು. ಫಾತೆಖಾನಿ ಅವರು ಈ ಮುಂಚೆ ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಅವರಿಗೂ ಆಪ್ತರಾಗಿದ್ದರು.
ಇಬ್ಬರು ಆದಾಯ ಕುರಿತು ಐಟಿ ಇಲಾಖೆಗೆ ಸರಿಯಾದ ಮಾಹಿತಿ ನೀಡದಿರುವುದು. ತೆರಿಗೆ ಸರಿಯಾಗಿ ಭರಿಸದೆ ಹೆಚ್ಚಿನ ಆಸ್ತಿಗಳನ್ನು ಹೊಂದಿರುವಂತಿದೆ. ಆ ಮಾಹಿತಿಯಂತೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸುವ ಮೂಲಕ ಇಬ್ಬರಿಗೂ ಭರ್ಜರಿ ಶಾಕ್ ನೀಡಿದೆ.
ಮಧ್ಯಾಹ್ನದಿಂದ ರಾತ್ರಿ 10 ಗಂಟೆಯವರೆಗೂ ಐಟಿ ಅಧಿಕಾರಿಗಳ ತಂಡದವರು ವಾಹೀದ್‍ಅಲಿ ಫಾತೆಖಾನಿ ಮತ್ತು ಜಹಾಗೀರದಾರ ಅವರ ಮನೆಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆಯಲ್ಲಿ ಮನೆಯಲ್ಲಿ ಶೋಧ ನಡೆಸಿ, ಮನೆಯವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ಧಾರೆ.
ಅದಕ್ಕೆ ಪೂರಕವಾಗಿರುವ ದಾಖಲೆಗಳನ್ನು ತೋರಿಸುವಂತೆ ಕೇಳಿದರು. ಎಲ್ಲ ಮಾಹಿತಿ ಪಡೆದುಕೊಂಡರು. ಶೋಧ ಕಾರ್ಯ ಅಪೂರ್ಣಗೊಂಡಿದ್ದು ಮತ್ತೇ ಭಾನುವಾರ ಮುಂದುವರೆಯುವ ಸಾಧ್ಯತೆ ಇದೆ. ಇಷ್ಟೆ ಅಲ್ಲದೆ ಇನ್ನಷ್ಟು ಉದ್ಯಮಿಗಳು ಹಾಗೂ ಕಪ್ಪು ಹಣ ಹೊಂದಿರುವ ಕುಳಗಳ ಮೇಲೂ ದಾಳಿ ಮಾಡಲು ಐಟಿಯವರು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಫಾತೆಖಾನಿ ಅವರು ರಾಜಕೀಯ ಜತೆಗೆ ರಿಯಲ್ ಎಸ್ಟೇಟ್ ಉದ್ಯಮ ಸಹ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಜಾಹಗೀರದಾರ ಅವರು ಹಲವು ಉದ್ಯೋಗಗಳನ್ನು ಹೊಂದಿದ್ದಾರೆ. ತೆರಿಗೆ ವಂಚನೆ ಮಾಡಿದ ಆರೋಪವೂ ಅವರ ಮೇಲಿದೆ. ದಾಳಿಯ ಕಾಲಕ್ಕೆ ಇಬ್ಬರ ಮನೆ ಹಾಗೂ ಕಚೇರಿಗಳಲ್ಲಿ ಏನೇನು ಪತ್ತೆಯಾಗಿದೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ.