ಶಾಸಕರ ಹೇಳಿಕೆಗೆ ಉಮೇಶ್ ಆಕ್ಷೇಪ

ರಾಮನಗರ, ನ.೧೯-ವಾರ್ಡ್‌ಗಳ ಅಭಿವೃದ್ಧಿ ತಡೆಯುವಷ್ಟು ಅಲ್ಲದಿದ್ದರೂ, ಅಭಿವೃದ್ಧಿ ಮಾಡುವಷ್ಟು ತಾಕತ್ತಿದೆ ಎಂದು ಪುರಸಭೆ ಸದಸ್ಯ ಉಮೇಶ್ ಹೇಳಿದರು. ಪಟ್ಟಣದಲ್ಲಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ತಾಕತ್ತಿದ್ದರೆ ಅಭಿವೃದ್ಧಿ ಕಾಮಗಾರಿಗಳನ್ನು ತಡೆಯಲಿ ಎಂದು ಶಾಸಕರು ಮಾತನಾಡಿದ್ದಾರೆ. ಹಣ ಹಾಗೂ ಅಧಿಕಾರದ ವ್ಯಾಮೋಹದಿಂದ ಈ ರೀತಿ ಮಾತನಾಡಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಇದನ್ನು ಶಾಸಕರು ಅರಿತುಕೊಳ್ಳಬೇಕು ಎಂದರು. ಶಾಸಕರಾಗಿ ೪ ವರ್ಷ ಕಳೆದಿದೆ. ಬಿಡದಿ ಪಟ್ಟಣದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ಜನತೆಗೆ ತಿಳಿಸಬೇಕು. ಈ ಹಿಂದೆ ಯುಜಿಡಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಕ್ಯಾಬಿನೆಟ್‌ನಲ್ಲಿ ಅನುಮತಿ ಪಡೆಯಲಾಗಿತ್ತು. ಇದನ್ನು ಮುಂದುವರಿಸಿದ್ದೀರಿ ಎಂದರು.
ಮನೆ ರಸ್ತೆ ಸರಿಪಡಿಸಿಕೊಳ್ಳಿ: ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ, ವಾರ್ಡ್‌ಗಳಿಗೆ ಅನುದಾನ ಹಂಚಿಕೆ ತಾರತಮ್ಯ ಖಂಡಿಸಿ ಪುರಸಭೆ ಎದುರು ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ. ಜನರ ಜತೆಗೂಡಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದನ್ನು ಪಕ್ಕಕ್ಕಿಟ್ಟು, ಪ್ರತಿನಿತ್ಯ ಓಡಾಡುವ ನಿಮ್ಮ ಮನೆಯ ರಸ್ತೆಯನ್ನು ಮೊದಲು ದುರಸ್ತಿ ಮಾಡಿಸಿಕೊಳ್ಳಿ ಎಂದು ಟಕ್ಕರ್ ನೀಡಿದರು.