ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ಸಮುದಾಯ ಭವನ ಉದ್ಘಾಟನೆ

ವಿಜಯಪುರ, ಜು.13-ಒಬ್ಬ ಪ್ರಾಮಾಣಿಕ ಶಾಸಕ ಕ್ಷೇತ್ರದ ಅಭಿವೃದ್ಧಿಗೆ ಹೇಗೆ ಕೆಲಸ ಮಾಡಬಹುದು ಎಂಬುದನ್ನು ನಾನು ವಿಜಯಪುರ ನಗರದಲ್ಲಿ ಮಾಡಿ ತೊರಿಸಿದ್ದೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಕಾಸಗೇರಿ ಓಣಿಯಲ್ಲಿ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗಿರುವ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು ಅಭಿವೃದ್ಧಿಗೆ ಸ್ಥಳಿಯರ ಸಹಕಾರ ಅಗತ್ಯವಾಗಿದೆ. ರಸ್ತೆ ಅಗಲಿಕರಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಡೆಯುವಾಗ ಸಾರ್ವಜನಿಕರು ತಕರಾರು ತೆಗೆಯುತ್ತಾರೆ. ಅದು ಸಹಜ, ಅಂತಹ ತಕರಾರುಗಳ ಮಧ್ಯ ನಾನು ಅಭಿವೃದ್ಧಿಗೆ ವೇಗ ನೀಡಿದ್ದೇನೆ. ನಗರದಲ್ಲಿ ಸಿಸಿ ರಸ್ತೆ, ಓಪನ್ ಜಿಮ್, ಶುದ್ಧ ಕುಡಿಯುವ ನೀರಿನ ಘಟಕ, ಚಿಲ್ಡ್ರನ್ ಪಾರ್ಕ ಸೇರಿದಂತೆ ಅನೇಕ ಕಾಮಗಾರಿಗಳನ್ನು ಮಾಡಲಾಗಿದ್ದು ಇನ್ನು ಕೆಲವಡೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಪೂರ್ಣಗೊಂಡ ಕಾಮಗಾರಿಗಳು ಇಂದು ಸಾರ್ವಜನಿಕ ಉಪಯೋಗಕ್ಕೆ ಮುಕ್ತವಾಗಿವೆ. 10 ವರ್ಷಗಳ ಹಿಂದೆ ನಗರ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಲಿ. ನೀವು ಮನೆಯಿಂದ ಹೊರ ಬಂದು ಮತದಾನ ಮಾಡಿ ನನ್ನನ್ನು ಗೆಲ್ಲಿಸಿದ್ದಿರಿ, ಅದರ ಫಲವನ್ನು ನಗರದ ಅಭಿವೃದ್ಧಿ ಮೂಲಕ ತಮಗೆ ತೋರಿಸಿಕೊಟ್ಟಿದ್ದೇನೆ ಎಂದರು.
ನಗರದಲ್ಲಿ 24*7 ಕುಡಿಯುವ ನೀರು ಪ್ರತಿ ಮನೆಗೂ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅದರ ಭಾಗವಾಗಿ ಕೋಲ್ಹಾರನಿಂದ ವಿಜಯಪುರಕ್ಕೆ ಸಿಮೆಂಟ್ ಪೈಪ್‍ಗಳನ್ನು ಅಳವಡಿಸಲಾಗುತ್ತಿದ್ದು, ನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ತಲುಪಿಸುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಣ ನೀಡಲಾಗಿದೆ. ಶಾಸಕರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ, ಸಮುದಾಯ ಭವನಗಳಿಗೆ ನೀಡಿಡಲಾಗಿದೆ. ಅದನ್ನು ಹೊರತುಪಡಿಸಿ ವೈಯಕ್ತಿಕವಾಗಿಯೂ ಹಣವನ್ನು ನೀಡಲಾಗಿದ್ದು ಇದರಿಂದ ದೇವಸ್ಥಾನದಲ್ಲಿ ಬಡಾವಣೆಯ ಬಡವರು, ಎಲ್ಲ ವರ್ಗದ ಸಾರ್ವಜನಿಕರು ಕಡಿಮೆ ವೆಚ್ಚದಲ್ಲಿ ಮಧುವೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ಎಂಬುದು ನನ್ನ ಭಾವನೆ ಎಂದರು.
ನಗರದಲ್ಲಿ ರಸ್ತೆ, ಬೀದಿ ದೀಪ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಶಂಕು ಸ್ಥಾಪನೆ ಮಾಡಲಾಗುತ್ತಿದೆ. ನಗರದಲ್ಲಿ ಎಲ್‍ಇಡಿ ಬಲ್ಬ ಅಳವಡಿಸಲಾಗುತ್ತಿದ್ದು, ಸುಮಾರು 26 ಸಾವಿರ ಬಲ್ಬಗಳನ್ನು ನಗರದ ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿ ಅಳವಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಚಂದ್ರು ಚೌಧರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಚಾಯಾ ಮಶಿಯವರ, ಮುಖಂಡರಾದ ಭಿಮಸಿ ಪೂಜಾರಿ, ಈರಪ್ಪ ಇಂಡಿ, ಸಂತೋಷ ತಳಕೇರಿ, ಮಡಿವಾಳ ಯಾಳವಾರ, ಶ್ರೀಶೈಲ ಪೂಜಾರಿ, ಮಹಾದೇವ ಹರಕಾರಿ, ಚನ್ನಬಸಪ್ಪ ಇಂಚಗೇರಿ, ವಿಜಯಕುಮಾರ ಗಚ್ಚಿನಕಟ್ಟಿ, ಮಲ್ಲಮ್ಮ ಜೊಗೂರ, ಗುರು ಪುಜಾರಿ, ರಾಜೇಶ್ವರಿ ಕಮತಗಿ, ದಾನಮ್ಮ ಕಮತಗಿ, ರಾಜಶೇಖರ ಭಜಂತ್ರಿ, ಗುರುಪಾದ ಗಚ್ಚಿನಕಟ್ಟಿ, ರಮೇಶ ಪೂಜಾರಿ, ನಿಂಗು ವಕ್ಕಳಿ ಸೇರಿದಂತೆ ಬಡಾವಣೆ ಹಿರಿಯರು, ನಾಗರಿಕರು ಉಪಸ್ಥಿತರಿದ್ದರು.