ಶಾಸಕರ ಸದಸ್ಯತ್ವ ರದ್ಧತಿಗೆ ಒತ್ತಾಯ

ಕೋಲಾರ ಮಾ.೨೮- ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳವನ್ನು ಒತ್ತುವರಿ ಮಾಡಿಕೊಂಡಿರುವ ಶಾಸಕರ ಸದಸ್ಯತ್ವವನ್ನು ರದ್ದು ಮಾಡುವ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿ ಮಾ.೨೯ರಂದು ಜಿಲ್ಲಾಧಿಕಾರಿಗಳ ಕಚೇರಿಯೆದುರು ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬಂಗಾರಪೇಟೆ ರೈಲ್ವೇ ನಿಲ್ದಾಣದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡರು ಅಕ್ರಮ ಗಣಿಗಾರಿಕೆಗೆ ಗೋಮಾಳ ಜಮೀನು ಕಬಳಿಕೆ, ಶ್ರೀನಿವಾಸಪುರ ಶಾಸಕರಾದ ಕೆ.ಆರ್.ರಮೇಶ್‌ಕುಮಾರ್ ಅವರು ನೂರಾರು ಎಕರೆಗೂ ಹೆಚ್ಚು ಅರಣ್ಯ ಭೂಮಿ ಕಬಳಿಕೆ ಜೊತೆಗೆ ಸ್ಥಳೀಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಗುಂಡುತೋಪು, ಗೋಮಾಳ, ಕೆರೆ, ಜಮೀನನ್ನು ಒತ್ತುವರಿ ಮಾಡಿಕೊಂಡು ಲೇಔಟ್, ಗಾಲ್ಫ್ ಅಭಿವೃದ್ಧಿಪಡಿಸಿದ್ದಾರೆ.
ಈ ಬಗ್ಗೆ ಸತತವಾಗಿ ೧೦ ವರ್ಷಗಳಿಂದ ಹೋರಾಟದ ಜೊತೆಗೆ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಮಾನ್ಯ ನ್ಯಾಯಾಲಯ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ಮಾಡಿರುವುದರಿಂದ ಭೂ ಕಬಳಿಕೆ ಆರೋಪ ಇವರ ಮೇಲಿರುವುದರಿಂದ ಇವರ ಶಾಸಕ ಸದಸ್ಯತ್ವ ರದ್ದು ಮಾಡುವ ಜೊತೆಗೆ ಭೂ ಆರೋಪ ಮುಕ್ತ ಆಗುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನಾತ್ಮಕವಾಗಿ ತಡೆ ಹಿಡಿಯಬೇಕೆಂದು ಚುನಾವಣಾಧಿಕಾರಿಗಳನ್ನು ಸಭೆಯಲ್ಲಿ ಒತ್ತಾಯಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಶಾಸಕರು ಸಂವಿಧಾನದಡಿಯಲ್ಲಿ ಕೆಲಸ ನಿರ್ವಹಿಸುವಾಗ ಪ್ರಾಮಾಣಿಕವಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಆದರೆ, ಎಲ್ಲಾ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರ ಬರುವುದೇ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ಎಂಬಂತೆ ಬಿಂಬನೆ ಮಾಡುವುದು ಯಾವ ನ್ಯಾಯ ? ಎಂದು ಪ್ರಶ್ನಿಸಿದರು,
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಆರೋಪವಿಲ್ಲ. ಆದರೆ, ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ಗಾಲ್ಫ್ ಕೋಳಿ ಫಾರಂಗಳನ್ನು ನಿರ್ಮಿಸಿರುವುದು ಶಾಸಕರ ಭೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪ ಮಾಡಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಅಕ್ರಮ ಗಣಿಗಾರಿಕೆಗೆ,ಗೋಮಾಳ ಒತ್ತುವರಿ ಬಗ್ಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿರುವ ಜೊತೆಗೆ ಪ್ರಭಾವಿ ರಾಜಕಾರಣಿ ಕೆ.ಆರ್.ರಮೇಶ್ ಕುಮಾರ್ ತನ್ನ ಹುಟ್ಟೂರಿನಲ್ಲಿ ನೂರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಜೊತೆಗೆ ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ಅಣ್ಣಿಹಳ್ಳಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮಾವಿನ ತೋಪು ಅಭಿವೃದ್ಧಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು,