ಶಾಸಕರ ಪ್ರಯತ್ನದಿಂದಲೇ ಮಲ್ಲಾಬಾದ್ ಏತ ನೀರಾವರಿಗೆ 330.40 ಕೋಟಿ ರೂ.ಗಳ ಅನುದಾನ: ಶೌಕತ್ ಅಲಿ ಆಲೂರ್

ಕಲಬುರಗಿ:ಮಾ.9:ಜೇವರ್ಗಿ ತಾಲ್ಲೂಕಿನ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರವು 330.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಸ್ವಾಗತಾರ್ಹವಾಗಿದೆ. ರಾಜ್ಯ ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ಅವರು ಮಾಡಿದ ಹೋರಾಟದ ಫಲವಾಗಿ ಅನುದಾನ ಸಿಕ್ಕಿದೆ ಎಂದು ಕಾಂಗ್ರೆಸ್ ಪಕ್ಷದ ರಾಜೀವಗಾಂಧಿ ಪಂಚಾಯಿತಿರಾಜ್ ಸಂಘಟನೆಯ ರಾಜ್ಯ ಸಂಚಾಲಕ ಶೌಕತ್ ಅಲಿ ಆಲೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ವಿರೋಧ ಪಕ್ಷಗಳವರು ಶಾಸಕರ ಪಾತ್ರ ಇಲ್ಲ ಎಂದು ಹೇಳಿಕೆ ನೀಡುತ್ತಿರುವುದು ಖಂಡನಾರ್ಹ ಎಂದರು.
ಶಾಸಕ ಡಾ. ಅಜಯಸಿಂಗ್ ಅವರು ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಬಾಕಿ ಕಾಮಗಾರಿಗಾಗಿ ಅನುದಾನ ಬಿಡುಗಡೆಗಾಗಿ ಬೆಳಗಾವಿ ಹಾಗೂ ಬೆಂಗಳೂರು ಅಧಿವೇಶನಗಳಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದರು. ಹೋರಾಟದ ಹಾದಿಯನ್ನೂ ಸಹ ಹಿಡಿದಿದ್ದರು. ಹಾಗಾಗಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಉಳಿದ ಕಾಮಗಾರಿಗಳಿಗೆ ಸರ್ಕಾರದಿಂದ 330.40 ಕೋಟಿ ರೂ.ಗಳ ಅನುಮೋದನೆ ದೊರಕಿರುವುದಕ್ಕೆ ಕ್ಷೇತ್ರದ ಶಾಸಕರೇ ಕಾರಣರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಕೃಷ್ಣಾ ಭಾಗ್ಯ ಜಲ ನಿಗಮದ ಮಂಡಳಿಯ ಸಭೆಯಲ್ಲಿ ಅನುಮೋದನೆ ದೊರಕಿರುವುದು ಯೋಜನೆ ಪೂರ್ಣವಾಗಲು ಅನುಕೂಲವಾಗಲಿದೆ. ತಾಲ್ಲೂಕಿನ 42 ಗ್ರಾಮಗಳು ಹಾಗೂ ಶಹಾಪುರದ 17 ಮತ್ತು ಸುರಪುರದ 8 ಗ್ರಾಮಗಳೂ ಸೇರಿದಂತೆ ಒಟ್ಟು 72 ಗ್ರಾಮಗಳ ಜನತೆಗೆ ಹೆಚ್ಚಿನ ನೀರಾವರಿ ಸೌಲತ್ತು ದೊರಕಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಯೋಜನೆಯ ಉಳಿದ ಕಾಮಗಾರಿಗಳನ್ನು ಮಾಡಿ ಮುಗಿಸಲು ಹಣಕಾಸಿನ ಅನುಮೋದನೆ ದೊರಕಿರುವುದು ತುಂಬಾ ಮಹತ್ವದ್ದು. ಇದರಿಂದಾಗಿ ಹೆಚ್ಚುವರಿ ನೀರಾವರಿ ಸಾಮಥ್ರ್ಯ, ಸೃಷ್ಟಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಗತ್ಯ ಅನುದಾನವಿಲ್ಲದೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಅಪೂರ್ಣವಾಗಿತ್ತು. ಕಳೆದ ಮೂರು ವರ್ಷಗಳಿಂದ ಸದನದ ಒಳಗೆ ಹಾಗೂ ಹೊರಗೆ ಸತತ ಬೆನ್ನುಬಿದ್ದು ಹೆಚ್ಚಿನ ಅನುದಾನಕ್ಕಾಗಿ ಆಗ್ರಹಿಸಿದ್ದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ್ ಅವರು ತುಂಬಾ ಕಾಳಜಿ ವಹಿಸಿ ನಮ್ಮ ಆಗ್ರಹಕ್ಕೆ ಸ್ಪಂದಿಸಿ ಯೋಜನೆಯ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುದಾನ ಮಂಜೂರಾಗಿ ನೀಡಿದ್ದಕ್ಕಾಗಿ ಅವರಿಗೆ ಹಾಗೂ ಸರ್ಕಾರಕ್ಕೆ ಅಭಿನಂದಿಸುವುದಾಗಿ ಅವರು ಹೇಳಿದರು.
ಮಲ್ಲಾಬಾದ್ ಏತ ನೀರಾವರಿಯ ಲಿಫ್ಟ್ 1ರಲ್ಲಿ ಬರುವ ವಿತರಣಾ ಕಾಲುವೆ ಸಂಖ್ಯೆ 6ರಿಂದ 9ರವರೆಗಿನ ಹಾಗೂ ವಿತರಣಾ ಕಾಲುವೆ ಸಂಖ್ಯೆ 3ರಡಿಯಲ್ಲಿ ಬರುವ ಲ್ಯಾಟರಲ್ ನಿರ್ಮಾಣ ಪ್ಯಾಕೇಜ್ ಕಾಮಗಾರಿಗಳು, ಲಿಫ್ಟ್ 2ರಲ್ಲಿ ಬರುವ ವಿತರಣಾ ಕಾಲುವೆ ಸಂಖ್ಯೆ 1ರಿಂದ 13 ಹಾಗೂ ವಿತರಣಾ ಕಾಲುವೆ ಬಿಡಿ 1 ಮತ್ತು ಬಿಡಿ 2ರ ಲ್ಯಾಟರಲ್ ಒಳಗೊಂಡು ಪ್ಯಾಕೇಜ್ ಕಾಮಗಾರಿಗಳೀಗೆ ಅನುದಾನ ಮಂಜೂರಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಂಟಿ ಸಂಯೋಜಕ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ್ ಆಂದೋಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ತಮ್ಮಣ್ಣ ಬಾಗೇವಾಡಿ, ಪ್ರಕಾಶ್ ಪಾಟೀಲ್, ಶ್ರೀಮಂತ್ ರಾಸಣಗಿ, ರುಕುಂ ಪಟೇಲ್ ಪೋಲಿಸ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.