ಶಾಸಕರ ಪ್ರಮಾಣ ವಚನ

ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಗಿ ಆಯ್ಕೆಯಾಗಿರುವ ಆರ್.ವಿ. ದೇಶಪಾಂಡೆಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಶಾಸಕ ಈಶ್ವರ್ ಖಂಡ್ರೆ ಇದ್ದಾರೆ.

ಬೆಂಗಳೂರು, ಮೇ ೨೨- ರಾಜ್ಯ ವಿಧಾನಸಭೆಯ ೩ ದಿನದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ೧೬ನೇ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಸದಸ್ಯರುಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದಿನಿಂದ ಮೂರು ದಿನಗಳ ಕಾಲ ವಿಧಾನಸಭೆಯ ಅಧಿವೇಶನ ನಡೆಯಲಿದ್ದು, ಇಂದು ಮತ್ತು ನಾಳೆ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರ ಪ್ರಮಾಣ ವಚನ ನಡೆಯಲಿದೆ.
ಹಂಗಾಮಿ ಸಭಾಧ್ಯಕ್ಷರಾಗಿ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಕಾರ್ಯಭಾರ ನಿಭಾಯಿಸಿದ್ದು, ಸದನದಲ್ಲಿ ಒಬ್ಬೊಬ್ಬರೆ ನೂತನ ಸದಸ್ಯರುಗಳು ಪ್ರಮಾಣ ವಚನ ಸ್ವೀಕರಿಸಿದರು.
ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು. ಇದಾದ ಬಳಿಕ ಪ್ರತಿಪಕ್ಷದಲ್ಲಿ ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರಗ ಜ್ಞಾನೇಂದ್ರ ಸೇರಿದಂತೆ ಇತರ ಶಾಸಕರ ಕೈ ಕುಲುಕಿ ಶುಭಾಶಯ ಹಂಚಿಕೊಂಡರು. ಈ ವೇಳೆ ಬೊಮ್ಮಾಯಿ ಸೇರಿದಂತೆ ಇತg ಶಾಸಕರು ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಗವಂತ ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದ್ದ ನಾಯಕರನ್ನು ಭೇಟಿ ಮಾಡಿ ಹಸ್ತಲಾಘವ ಮಾಡಿ ಅಭಿನಂದನೆ ಸಲ್ಲಿಸಿದರು. ಬಳಿಕ ನೂತನ ಸಚಿವರು ಒಬ್ಬೊಬ್ಬರಾಗಿ ಪ್ರಮಾಣವಚನ ಸ್ವೀಕರಿಸಿದರು.
ಜಿ. ಪರಮೇಶ್ವರ್, ಕೆ.ಎಚ್ ಮುನಿಯಪ್ಪ, ಕೆ.ಜೆ ಜಾರ್ಜ್, ಎಂ.ಬಿ ಪಾಟೀಲ್, ಪ್ರಿಯಾಂಕ್‌ಖರ್ಗೆ, ಸತೀಶ್ ಜಾರಕಿಹೊಳಿ, ಜಮೀರ್‌ಅಹ್ಮದ್‌ಖಾನ್ ಪ್ರಮಾಣವಚನ ಸ್ವೀಕರಿಸಿ ಪ್ರತಿ ನಾಯಕರ ಪೀಠದತ್ತ ತೆರಳಿ ಪರಸ್ಪರ ಅಭಿನಂದನೆ ಸಲ್ಲಿಸಿದರು. ಆನಂತರ ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ಒಬ್ಬೊಬ್ಬರಾಗಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ಆನಂದ್ ಕೆ.ಎಸ್, ಅರಗ ಜ್ಞಾನೇಂದ್ರ, ಅಶೋಕ ಮಹದೇವಪ್ಪ, ಅಶೋಕ್ ಮನಗೂಳಿ, ಅಶೋಕ್ ಕುಮಾರ್ ರೈ, ಆರ್.ಅಶೋಕ್, ಟಿ.ಬಿ.ಜಯಚಂದ್ರ, ಅವಿನಾಶ್ ಜಾಧವ್, ಡಾ.ಅಜಯ್ ಸಿಂಗ್,ಬಾಬಾ ಸಾಹೇಬ್ ಪಾಟೀಲ್, ಬಸನಗೌಡ ದದ್ದಲ್,ಬಸನಗೌಡ ಪಾಟೀಲ್ ಯತ್ನಾಳ್ ಹಿಂದುತ್ವದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಸನಗೌಡ ತುರುವಿಹಾಳ್, ಬಸವರಾಜ ರಾಯರೆಡ್ಡಿ,ಬಸವರಾಜ ಬೊಮ್ಮಾಯಿ, ಬಸವರಾಜು ಶಿವಗಂಗ, ಬಸವರಾಜ ಮತ್ತಿಮೂಡ್
ಯು.ಟಿ ಖಾದರ್,ಅರವಿಂದ್ ಬೆಲ್ಲದ್, ಸತೀಶ್ ಜಾರಕಿಹೊಳಿ, ಶಿವನಂದಾ ಪಾಟೀಲ್, ಅಭಯ ಪಾಟೀಲ್, ಅತ್ಯಂತ ಹಿರಿಯ ಸದಸ್ಯ ೯೨ ವರ್ಷದ ಶಾಮನೂರು ಶಿವಶಂಕರಪ್ಪ ೮೨ ವರ್ಷದ ,ಜಿ.ಹಂಪಯ್ಯ ನಾಯ್ಕ್ ಹಾಗೂ ಅತ್ಯಂತ ಕಿರಿಯ ಸದಸ್ಯ ೨೮ ವರ್ಷದ ದರ್ಶನ್ ಧ್ರುವನಾರಾಯಣ್, ರಾಮಲಿಂಗಾರೆಡ್ಡಿ, ದುರ್ಯೋಧನ ಐಹೊಳೆ, ಭೈರತಿ ಬಸವರಾಜ್, ಕೆ.ಎನ್ ರಾeಣ್ಣ, ಧರಮಗೌಡ ಕಾಗೆ, ಡಾ.ಭರತ್ ಶೆಟ್ಟಿ, ಭೀಮಣ್ಣ ನಾಯಕ್, ಭೀಮನಗೌಡ ಬಸವನಗೌಡ ಪಾಟೀಲ್, ಭೋಜರಾಜ ಆರ್ ಪಾಟೀಲ, ಚೆಲುವರಾಯಸ್ವಾಮಿ ಇತರರು ಪತಿಜ್ಞಾವಿಧಿ ಸ್ವೀಕರಿಸಿದರು.
ಮೇ ೨೪ ಸ್ಪೀಕರ್ ಆಯ್ಕೆ
ಇಂದು ಮತ್ತು ನಾಳೆ ವಿಧಾನಸಭೆಯಲ್ಲಿ ನೂತನ ಸದಸ್ಯರ ಪ್ರಮಾಣ ವಚನ ಕಲಾಪಗಳು ನಡೆಯಲಿದ್ದು, ಮೇ ೨೪ ರಂದು ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.
ನೂತನ ಸಭಾಧ್ಯಕ್ಷರ ರೇಸ್‌ನಲ್ಲಿ ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್, ಟಿ.ಬಿ. ಜಯಚಂದ್ರ, ಕೆ.ಎನ್. ರಾಜಣ್ಣ ಇವರುಗಳ ಹೆಸರುಗಳಿದ್ದು, ಇವರಲ್ಲಿ ಒಬ್ಬರು ಸಭಾಧ್ಯಕ್ಷರಾಗಿ ಸಭಾಧ್ಯಕ್ಷರಾಗಿ ಆಯ್ಕೆಯಾಗುವರು.
ಇಂದು ಇಲ್ಲವೇ ನಾಳೆ ಕಾಂಗ್ರೆಸ್ ವರಿಷ್ಠರು ಸಭಾಧ್ಯಕ್ಷರ ಹೆಸರನ್ನು ಅಂತಿಮಗೊಳಿಸುವರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಅದಲು-ಬದಲು
೧೬ನೇ ವಿಧಾನಸಭೆಯ ಅಧಿವೇಶನದಲ್ಲಿ ಎಲ್ಲವೂ ಅದಲು-ಬದಲಾಗಿದೆ. ಆಡಳಿತ ಪಕ್ಷದಲ್ಲಿದ್ದ ಬಿಜೆಪಿ, ಪ್ರತಿಪಕ್ಷ ಸ್ಥಾನದಲ್ಲೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇಷ್ಟು ದಿನ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಈಗ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತಿದೆ.
ಕಾಂಗ್ರೆಸ್ ಪಕ್ಷದ ಶಾಸಕರ ಮೊಗದಲ್ಲಿ ಅಧಿಕಾರಕ್ಕೆ ಬಂದಿರುವ ಸಂಭ್ರಮ ಶಕ್ತಿಸೌಧದಲ್ಲಿ ಕಂಡು ಬಂತು. ಗೆಲುವು ಸಾಧಿಸಿದ್ದ ಶಾಸಕರು ಹಸನ್ಮುಖರಾಗಿ ಸದನ ಪ್ರವೇಶಿಸಿ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತುಕೊಂಡು ಪರಸ್ಪರ ಅಭಿನಂದನೆಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ನೂತನ ಸಚಿವರು ಆಸೀನರಾಗಿದ್ದರು.
ಇತ್ತ ಪ್ರತಿಪಕ್ಷ ಬಿಜೆಪಿ ಪಾಳಯದಲ್ಲಿ ಸೋಲಿನ ಕಾರ್ಮೋಡ ಕವಿದಿತ್ತು. ಈ ಬಾರಿಯೂ ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದ ಬಿಜೆಪಿ, ಈಗ ಪ್ರತಿಪಕ್ಷ ಸ್ಥಾನವನ್ನು ಅಲಂಕರಿಸಿದೆ.
ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಇನ್ನೂ ಆಯ್ಕೆಯಾಗಿಲ್ಲ. ಆದರೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ಸ್ಥಾನದ ಮೊದಲ ಆಸನದಲ್ಲಿ ಕುಳಿತಿದ್ದರೆ, ಪಕ್ಕದ ಆಸನದಲ್ಲಿ ಆರ್. ಅಶೋಕ್, ಅರಗ ಜ್ಞಾನೇಂದ್ರ ಮತ್ತಿತರ ನಾಯಕರು ಆಸೀನರಾಗಿದ್ದ ದೃಶ್ಯ ಕಂಡು ಬಂತು.

ಸಿಎಂ ವಿಶೇಷಾಧಿಕಾರಿ ನೇಮಕ
ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ವೆಂಕಟೇಶಯ್ಯ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಡಾ. ವೆಂಕಟೇಶಯ್ಯ ಅವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ೨೦.೦೫.೨೦೨೩ ರಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ವೆಂಕಟೇಶಯ್ಯರವರು ಈ ಹಿಂದೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯರವರ ಆಪ್ತ ಸಹಾಯಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ಅವರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಬೆಂಗಳೂರಿನ ಬಾಪೂಜಿ ಲೇಔಟ್‌ನ ಎಂ. ವೆಂಕಟೇಶ್ ಅವರನ್ನು ದಿ: ೨೦.೦೫.೨೦೨೩ ರಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಯವರ ಮುಂದಿನ ಅಧಿಕಾರದವರೆಗೆ ವಿಶೇಷಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.