ಶಾಸಕರ ಪುತ್ರನ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಬಂಧನ

ತುಮಕೂರು, ಏ. ೮- ತುರುವೇಕೆರೆ ಶಾಸಕ ಮಸಾಲ ಜಯರಾಂ ಅವರ ಪುತ್ರನ ಮೇಲೆ ಹಲ್ಲೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಎಸ್.ಪುರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ಎನ್ನಲಾದ ನರಸಿಂಹಮೂರ್ತಿ, ಆನಂದ್ ಹಾಗೂ ಬಿಜೆಪಿ ಕಾರ್ಯಕರ್ತರೆನ್ನಲಾದ ವಸಂತ ಮತ್ತ ಲಕ್ಷ್ಮಣ ಎಂಬುವರು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಜೆಡಿಎಸ್ ಕಾರ್ಯಕರ್ತ ಅವೆರಹಳ್ಳಿ ಕೃಷ್ಣ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಹೆಬ್ಬೂರು-ಸಿ.ಎಸ್.ಪುರ ಮಧ್ಯದ ನೆಟ್ಟಿಕೆರೆ ಗೇಟ್ ಬಳಿ ಶಾಸಕ ಮಸಾಲ ಜಯರಾಂ ಅವರ ಪುತ್ರ ತೇಜು ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿತ್ತು. ಗದ್ದಲ ಗಮನಿಸಿದ ನೆಟ್ಟಿಕೆರೆ ಜನರು ಸ್ಥಳಕ್ಕೆ ಬರುತ್ತಿದ್ದಂತೆ ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಕೃಷ್ಣ ಎಂಬುವರ ಮೇಲೆ ಹಲ್ಲೆ ಸಹ ನಡೆದಿತ್ತು.
ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತ ಈಡಗೂರನ ಆನಂದ್ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಶಾಸಕ ಮಸಾಲ ಜಯರಾಮ್ ಅವರ ಕುಮ್ಮಕ್ಕಿನಿಂದ ಈ ಹಲ್ಲೆ ನಡೆದಿದೆ ಎಂದು ಜೆಡಿಎಸ್ ಮುಖಂಡರು ದೂರಿದ್ದರು. ಇದಕ್ಕೆ ಪ್ರತಿಕಾರವಾಗಿ ಶಾಸಕರ ಪುತ್ರನ ಮೇಲೆ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಂ.ಟಿ. ಕೃಷ್ಣ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.
ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಎರಡೂ ಪಕ್ಷದವರು ದೂರು ನೀಡಿದ್ದು, ಪೊಲೀಸರು ಮುಂದಿನ ಕೈಗೊಂಡಿದ್ದಾರೆ.