ಶಾಸಕರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಲಸಿಕೆ

ಬಳ್ಳಾರಿ, ಜೂ.11: ಬಳ್ಳಾರಿ: ಕರೋನಾ ಸೋಂಕು ಎದುರಿಸಲು ಜನತೆ ಮೊದಲು ಮಾಡಬೇಕಾದ ಕೆಲಸ ಎಂದರೆ ಎಲ್ಲರೂ ಕೋವಿಡ್ ಲಸಿಕೆ ಪಡೆಯಬೇಕು ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ಅವರು ಇಂದು ನಗರದ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಆರೋಗ್ಯ ಇಲಾಖೆಯಿಂದ 24 ಮತ್ತು 1 ವಾರ್ಡಿನ 45 ವರ್ಷ ಮೇಲ್ಪಟ್ಟ ಜನರಿಗೆ ಹಮ್ಮಿಕೊಂಡಿದ್ದ ಲಸಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್ ಎರಡು ಅಲೆಗಳನ್ನು ನೋಡಿದೆ. ಸೋಂಕಿನ‌ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.‌ ಇನ್ನು ಮೂರನೇ ಅಲೆ ಬರುತ್ತದೆ ಎನ್ನಲಾಗುತ್ತಿದೆ. ಅದಕ್ಕಾಗಿ ಎಲ್ಲರೂ ಲಸಿಕೆ ಪಡೆಯುವುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ 24 ನೇ ವಾರ್ಡಿನ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಪಕ್ಷದ ಮುಖಂಡರಾದ ವೀರಶೇಖರ ರೆಡ್ಡಿ, ಗುರುಮೂರ್ತಿ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.