ಶಾಸಕರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಚುನಾವಣೆ: ಆರೋಪ

ಅರಸೀಕೆರೆ, ನ. ೭- ತಾಲ್ಲೂಕಿನ ಬೆಳಗುಂಬ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಕ್ರಿಯೆಯನ್ನು ಅಧಿಕಾರಿಗಳು ಸಹಕಾರ ಕಾಯ್ದೆ ನಿಯಮ ಪಾಲಿಸದೆ ಶಾಸಕರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ನಡೆಸಿರುವ ಕಾರಣ ಜೆಡಿಎಸ್ ಬೆಂಬಲಿತರೆ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ವಿಕ್ರಂ ಆರೋಪಿಸಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರನ್ನು ಎಲ್ಲಿಂದಲೋ ಬಂದವರು ಇಲ್ಲಿ ಅವರ ರಾಜಕೀಯ ನಡೆಯಲ್ಲ ಎಂದು ಪದೇ ಪದೇ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಮುಕ್ತ ಅವಕಾಶ ನೀಡಲಾಗಿದೆ ಎಂದರು.
ಜೆಡಿಎಸ್ ವರಿಷ್ಠರೇ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ಗೊತ್ತಿಲ್ಲವೇ. ಪಕ್ಷದ ವರಿಷ್ಠರ ಪರಿಸ್ಥಿತಿಯೇ ಹೀಗಿರುವಾಗ ಎನ್. ಆರ್. ಸಂತೋಷ್ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಶಾಸಕರಿಗೆ ಇಲ್ಲ ಎಂದರು.
ಕಳೆದ ೨೫ ವರ್ಷಗಳಿಂದ ಮುಚ್ಚಲಾಗಿದ್ದ ಕೃಷಿ ಪತ್ತಿನ ಸಹಕಾರ ಸಂಘವನ್ನು ೮ ವರ್ಷಗಳ ಸತತ ಪರಿಶ್ರಮದಿಂದ ಶಾಸಕರ ವಿರೋಧ ಲೆಕ್ಕಿಸದೆ ಸಚಿವರು ಹಾಗೂ ಮುಖ್ಯಮಂತ್ರಿ ಅವರಿಂದ ನಮ್ಮ ಪಕ್ಷದ ಹಿರಿಯರು ಅನುಮತಿ ತಂದು ನಡೆಸುವ ಚುನಾವಣೆ ನಡೆಸುವ ಸಂದರ್ಭದಲ್ಲಿ ಶಾಸಕರು ರಾತ್ರೋ ರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಷೇರುದಾರರ ಸಂಖ್ಯೆಯನ್ನು ಹೆಚ್ಚಿಸಲು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಮುಗ್ಧ ರೈತರಿಗೆ ಹಣ ತುಂಬಿ ಷೇರುದಾರರರನ್ನಾಗಿ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಇವುಗಳನ್ನು ನಾವುಗಳು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದಾಗಿತ್ತು. ಆದರೆ ರೈತರ ಹಿತದೃಷ್ಟಿಯಿಂದ ಸಹಕಾರ ಸಂಘ ಅನಿವಾರ್ಯವಾಗಿರುವ ಕಾರಣ ಸುಮ್ಮನಾಗಿದ್ದೆವೆ ಎಂದು ವಿವರಿಸಿದರು.
ಕಳೆದ ೧೩ ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ತಾವು ಎಂದಿಗೂ ಸಹಕಾರ ಸಂಘಗಳ ಚುನಾವಣೆ ಪ್ರಚಾರಕ್ಕೆ ಹೋಗಿರಲಿಲ್ಲ ಎನ್ನುವ ಶಾಸಕರಿಗೆ ಈಗ ಎನ್.ಆರ್. ಸಂತೋಷ್ ಆಗಮನದಿಂದ ಸೋಲಿನ ಭೀತಿ ಎದುರಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಈ ಸೋಲನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಕ್ಷೇತ್ರದಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರವನ್ನು ಬ್ರಹ್ಮಾಸ್ತ್ರ ಮಾಡಿಕೊಂಡು ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕಾಟಿಕೆರೆ ಪ್ರಸನ್ನಕುಮಾರ್, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಲೋಕೇಶ್, ಚಂದ್ರಶೇಖರ್, ರಘು, ಮೋಹನ್‌ಕುಮಾರ್, ಪರಮೇಶ್ವರಪ್ಪ, ರವೀಶ್, ವೀರಪ್ಪಕುಮಾರ್ ಮತ್ತಿತರರು ಉಪಸ್ಥಿತರಿದ್ದರು.