ಶಾಸಕರ ಆಶೀರ್ವಾದದಿಂದ ಮೇಯರ್ ಆಗಿದ್ದೇನೆ; ವಿನಾಯಕ ಪೈಲ್ವಾನ್

ದಾವಣಗೆರೆ. ಮಾ.೫; ಹಿರಿಯರು ಹಾಗೂ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರ ಆಶೀರ್ವಾದದಿಂದ ಮೇಯರ್ ಆಗಿದ್ದೇನೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್ ಹೇಳಿದರು.ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಅವರು ನನ್ನನ್ನು ಯಾರೂ ಹೈಜಾಕ್ ಮಾಡಿಲ್ಲ. ಶಾಸಕರ ಹಾಗೂ  ಪಾಲಿಕೆ ಸದಸ್ಯರ  ಆಶೀರ್ವಾದದಿಂದ ನಾನು ಮೇಯರ್ ಆಗಿದ್ದೇನೆ ಎಂದು ಹೇಳಿದರು. ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ  ಬಿಜೆಪಿ ಅವರ ಕುತಂತ್ರ ನಡೆಯಲಿಲ್ಲ ನಮ್ಮ ಅಭ್ಯರ್ಥಿ ಗೆಲುವು ಪಡೆದರು. ಈ ಮೂಲಕ‌ ಪಾಲಿಕೆ ಚುನಾವಣೆಯಲ್ಲಿ  ಕಾಂಗ್ರೆಸ್  ಗೆಲುವು ಸಾಧಿಸಿದೆ.ಬಿಜೆಪಿಯ ಆಟ ನಡೆಯಲಿಲ್ಲ  ಎಂದರು. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸವಿತಾ ಹುಲ್ಮನಿ ಗಣೇಶ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೂಚನೆಯಂತೆ ತಮ್ಮ ನಾಮಪತ್ರ ಹಿಂಪಡೆದ ಕಾರಣ, ಏಕೈಕ ಸ್ಪರ್ಧಿ ವಿನಾಯಕ ಪೈಲ್ವಾನ್ ಅವರನ್ನು ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು. ಉಪ ಮೇಯ‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧ ಹೆಗ್ಗಪ್ಪ ಅವರು ಕಾಂಗ್ರೆಸ್‌ನ ಶಿವಲೀಲಾ ಅವರನ್ನು ಸೋಲಿಸಿದರು.ಪಾಲಿಕೆಯ ನೂತನ ಮೇಯರ್ ಆಗಿ ವಿನಾಯಕ ಪೈಲ್ವಾನ್ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ಗೆಲುವು ನಮ್ಮದೇ ಎಂದು ಘೋಷಣೆ ಕೂಗಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯವಾಗಲಿ ಎಂದು ಬಿಜೆಪಿ ಸದಸ್ಯರು ಕೂಗಿದರೆ, ಕಾಂಗ್ರೆಸ್ ಅಭ್ಯರ್ಥಿಗೆ ಜಯವಾಗಲಿ ಎಂದರು ಕಾಂಗ್ರೆಸ್‌ ಸದಸ್ಯರು.