ಶಾಸಕರ ಅಹವಾಲು ಸಲ್ಲಿಕೆ

ಬೆಂಗಳೂರು,ಜೂ.೧೭- ರಾಜ್ಯ ಬಿಜೆಪಿಯಲ್ಲಿನ ಅಂರ್ತಯುದ್ಧಕ್ಕೆ ತೆರೆ ಎಳೆದು ಪಕ್ಷದಲ್ಲಿನ ಬಿಕ್ಕಟ್ಟಿಗೆ ಪರಿಹಾರ ಸೂತ್ರ ರೂಪಿಸಲು ರಾಜ್ಯಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿರುವ ಬಿಜೆಪಿ ಉಸ್ತುವಾರಿ ಹಾಗೂ ಪಕ್ಷ್ಚದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್‌ರವರು ಇಂದು ಬಿಜೆಪಿ ಶಾಸಕರುಗಳ ಅಹವಾಲು ಆಲಿಸಿದ್ದು, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪರ-ವಿರೋಧ ಅಹವಾಲುಗಳು ಸಲ್ಲಿಕೆಯಾಗಿವೆ.
ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ, ಗುಂಪುಗಾರಿಕೆಯನ್ನು ಶಮನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿನ್ನೆಯಿಂದಲೇ ಸರಣಿ ಸಭೆ ನಡೆಸಿರುವ ಅರುಣ್‌ಸಿಂಗ್, ಇಂದು ಬೆಳಿಗ್ಗೆಯಿಂದಲೇ ಪಕ್ಷದ ಕಚೇರಿಯಲ್ಲಿ ಶಾಸಕರುಗಳ ಅಹವಾಲಿಗೆ ಕಿವಿಗೊಟ್ಟರು. ಪ್ರತಿಯೊಬ್ಬ ಶಾಸಕರ ಜತೆಯೂ ಪ್ರತ್ಯೇಕವಾಗಿ ಮಾತನಾಡಿ, ಅವರ ದೂರು-ದುಮ್ಮಾನಗಳಿಗೆ
ಕಿವಿಯಾದರು.
ದೂರು-ಪ್ರತಿದೂರು, ಶೀಘ್ರ ನಿರ್ಧಾರಕ್ಕೆ ಒತ್ತಡ
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪರ-ವಿರೋಧ ಅಭಿಪ್ರಾಯಗಳನ್ನು ಶಾಸಕರು ವ್ಯಕ್ತಪಡಿಸಿದ್ದು, ಅರುಣ್‌ಸಿಂಗ್‌ರವರನ್ನು ಭೇಟಿ ಮಾಡಿದ್ದ ಶಾಸಕರಲ್ಲಿ ಬಿಎಸ್‌ವೈ ಆಪ್ತ ಬಣದ ಶಾಸಕರು ರಾಜಕಾರಣಕ್ಕೆ ನಾಯಕತ್ವ ಬದಲಾಯಿಸಬಾರದು. ಯಡಿಯೂರಪ್ಪ ಅರವರನ್ನೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಸಿ ಎಂದು ಮನವಿ ಮಾಡಿ ನಾಯಕತ್ವದ ವಿರುದ್ಧ ದನಿ ಎತ್ತಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅರುಣ್‌ಸಿಂಗ್‌ರವರಲ್ಲಿ ಕೋರಿದರು ಎಂದು ಹೇಳಲಾಗಿದೆ.
ಬಿಎಸ್‌ವೈ ಆಪ್ತ ಬಣದ ಶಾಸಕರ ದೂರಿಗೆ ಬಿಎಸ್‌ವೈ ವಿರೋಧಿ ಬಣದ ಶಾಸಕರುಗಳು ಪ್ರತಿದೂರು ಸಲ್ಲಿಸಿ ಆಡಳಿತದಲ್ಲಿ ಯಡಿಯೂರಪ್ಪನವರ ಪುತ್ರ ಸೇರಿದಂತೆ ಅವರ ಕುಟುಂಬದ ಹಸ್ತಕ್ಷೇಪ, ಶಾಸಕರುಗಳ ಕ್ಷೇತ್ರಗಳಿಗೆ ಅನುದಾನ ನೀಡದಿರುವುದು, ವಿರೋಧ ಪಕ್ಷದ ನಾಯಕರುಗಳ ಜತೆಗಿನ ಹೊಂದಾಣಿಕೆ ರಾಜಕಾರಣ, ಏಕ ಪಕ್ಷೀಯ ನಿರ್ಧಾರಗಳು ಈ ಎಲ್ಲವನ್ನೂ ಅರುಣ್‌ಸಿಂಗ್‌ರವರ ಗಮನಕ್ಕೆ ತಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆರೋಪಗಳ ಸುರಿಮಳೆ ಗೈದರು ಎನ್ನಲಾಗಿದೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಶೀಘ್ರ ಒಂದು ಸೂಕ್ತ ನಿರ್ಧಾರಕ್ಕೆ ಬರುವಂತೆ ಕೆಲ ಶಾಸಕರು ಒತ್ತಾಯಿಸಿದರು ಎನ್ನಲಾಗಿದೆ. ಈ ಬಗ್ಗೆ ತೀರ್ಮಾನ ವಿಳಂಬ ಮಾಡಿದಷ್ಟು ಪಕ್ಷದ ವರ್ಚಸ್ಸಿಗೆ ಹಾನಿಯಾಗುತ್ತದೆ. ತಡ ಮಾಡದೆ ಬದಲಾವಣೆ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸುವಂತೆಯೂ ಕೆಲ ಶಾಸಕರು ಮನವಿ ಮಾಡಿದರು ಎಂದು ಗೊತ್ತಾಗಿದೆ.
ಇಂದು ಬೆಳಿಗ್ಗೆ ೧೦ ಗಂಟೆಯಿಂದ ಪಕ್ಷದ ಕಚೇರಿಯಲ್ಲಿ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲು ಜತೆ ಕುಳಿತು ತಮ್ಮನ್ನು ಭೇಟಿ ಮಾಡಲು ಬಯಸಿದ್ದ ಶಾಸಕರ ಅಹವಾಲುಗಳನ್ನು ಕೇಳಿದರು.
ಉಸ್ತುವಾರಿ ಅರುಣ್‌ಸಿಂಗ್‌ರವರನ್ನು ಭೇಟಿ ಮಾಡಲು ಇಂದು ೩೫ ಶಾಸಕರು ಸಮಯ ಕೇಳಿದ್ದು, ಪ್ರತಿ ಶಾಸಕರಿಗೂ ೧೦ ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಸಂಜೆಯವರೆಗೂ ಶಾಸಕರುಗಳ ಅಹವಾಲು ಆಲಿಕೆ ನಡೆಯಲಿದೆ.
ದಿಢೀರ್ ಸ್ಥಳ ಬದಲಾವಣೆ
ಶಾಸಕರುಗಳ ಅಹವಾಲು ಆಲಿಕೆಯನ್ನು ಮೊದಲು ಕುಮಾರಕೃಪ ಅತಿಥಿ ಗೃಹದಲ್ಲೇ ನಡೆಸಲು ನಿರ್ಧರಿಸಲಾಗಿತ್ತು. ಅದರೆ, ಶಾಸಕರುಗಳ ಜತೆಗಿನ ಮಾತುಕತೆಗಳ ರಹಸ್ಯವನ್ನು ಕಾಪಾಡಿಕೊಳ್ಳಲು ಪಕ್ಷದ ಕಚೇರಿಯಲ್ಲೇ ಈ ಅಹವಾಲು ಸಲ್ಲಿಕೆ ಕಾರ್ಯ ನಡೆದರೆ ಸೂಕ್ತ ಎಂಬ ಸಲಹೆಗಳ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಬರುವಂತೆ ಶಾಸಕರುಗಳಿಗೆ ಸೂಚನೆ ರವಾನಿಸಿ
ಅರುಣ್‌ಸಿಂಗ್ ಪಕ್ಷದ ಕಚೇರಿಯಲ್ಲೇ ಶಾಸಕರ ಅಹವಾಲುಗಳನ್ನು ಆಲಿಸಿದರು.

ಬಾಕ್ಸ್
ಅರುಣ್‌ಸಿಂಗ್ ಕಿಡಿ
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳೆದುರು ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿರುವ ಸಚಿವರು ಹಾಗೂ ಶಾಸಕರ ವಿರುದ್ಧ ಕಿಡಿ ಕಾರಿರುವ ಅರುಣ್‌ಸಿಂಗ್ ತಮ್ಮನ್ನು ಇಂದು ಭೇಟಿಯಾದ ಶಾಸಕರು ಹಾಗೂ ಸಚಿವರುಗಳಿಗೆ ಬಹಿರಂಗವಾಗಿ ಏನನ್ನೂ ಮಾತನಾಡದಂತೆ ತಾಕೀತು ಮಾಡಿದರು ಎನ್ನಲಾಗಿದೆ.
ಮಾಧ್ಯಮಗಳ ಮುಂದೆ ನಿತ್ಯ ನಾಯಕತ್ವದ ಬಗ್ಗೆ ಹೇಳಿಕೆ ನೀಡುತ್ತಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್,ರೇಣುಕಾಚಾರ್ಯ ವಿರುದ್ಧ ಸಿಟ್ಟು ಹೊರ ಹಾಕಿರುವ ಅರುಣ್‌ಸಿಂಗ್ ಇನ್ನು ಮುಂದೆ ಇವರು ಏನೇ ಮಾತನಾಡಿದರೂ ನನಗೆ ವರದಿ ನೀಡಿ, ಬಹಿರಂಗವಾಗಿ ಮಾತನಾಡದಂತೆ ನಾನು ಇವರಿಗೆ ಸೂಚನೆ ಕೊಟ್ಟಿದ್ದೇನೆ. ಇವರ ಮೇಲೆ ನಿಗಾ ಇಡಿ ಎಂದು ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಗೆ ಸಲಹೆ ಮಾಡಿದರು ಎನ್ನಲಾಗಿದೆ. ಯಾವುದೇ ಶಾಸಕರು ಅಸಮಾಧಾನವಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಿ. ಬಹಿರಂಗವಾಗಿ ಮಾತನಾಡಿ, ಪ್ರಚಾರ ಗಿಟ್ಟಿಸಿಕೊಳ್ಳಬೇಡಿ. ಇದು ಪಕ್ಷಕ್ಕೆ ಹಾನಿ ಮಾಡುತ್ತದೆ ಎಂದು ಅರುಣ್‌ಸಿಂಗ್ ತಮ್ಮನ್ನು ಭೇಟಿಯಾದ ಶಾಸಕರಿಗೆ ಕಿವಿಮಾತು ಹೇಳಿದರು ಎನ್ನಲಾಗಿದೆ.
ನಿಮ್ಮ ಯಾವುದೇ ದೂರು-ದುಮ್ಮಾನಗಳಿಗೆ ಸ್ಪಂದಿಸುವ ಕೆಲಸವನ್ನು ಪಕ್ಷ ಮಾಡುತ್ತದೆ, ಸಣ್ಣ ವಿಚಾರಗಳನ್ನು ದೊಡ್ಡದು ಮಾಡಬೇಡಿ, ಎಲ್ಲ ವಿಚಾರದಲ್ಲೂ ಪಕ್ಷದ ಹಿತವನ್ನು ಗಮನದಲ್ಲಿಡಿ ಎಂದು ಶಾಸಕರುಗಳಿಗೆ ತಿಳಿ ಹೇಳಿದರು ಎಂದು ಅರುಣ್‌ಸಿಂಗ್‌ರವರನ್ನು ಭೇಟಿ ಮಾಡಿದ್ದ ಶಾಸಕರೊಬ್ಬರು ತಿಳಿಸಿದರು.