ಶಾಸಕರ ಅವಿರತ ಶ್ರಮದಿಂದ ಕ್ಷೇತ್ರದ ಕಲ್ಯಾಣ: ಸಂಸದ ಶರ್ಮಾ

ಹುಬ್ಬಳ್ಳಿ,ಮಾ19: ಅತ್ಯಂತ ಹಿಂದುಳಿದ ಪ್ರದೇಶವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಶಾಸಕ ಪ್ರಸಾದ ಅಬ್ಬಯ್ಯ ಅವರು ಮಾಡಿದ ಅವಿರತ ಶ್ರಮವೇ ಇಂದು ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳು ಕಾಣಸಿಗುತ್ತ್ತಿವೆ. ಜನರು ಅವರಿಗೆ ಇನ್ನಷ್ಟು ಬೆಂಬಲಿಸುವ ಮೂಲಕ ಕೈ ಬಲಪಡಿಸಬೇಕೆಂದು ಅಂಡಮಾನ್ ನಿಕೋಬಾರ್‍ನ ಸಂಸದರಾದ ಕುಲದೀಪ್‍ರಾಯ್ ಶರ್ಮಾ ಹೇಳಿದರು.
ಅವರು, ಇಲ್ಲಿನ ಹಳೇ ಹುಬ್ಬಳ್ಳಿ ನೂರಾನಿ ಪ್ಲಾಟ್‍ನಲ್ಲಿ ನಡೆದ ಶಾಸಕ ಅನುದಾದಡಿ ನೀಡಲಾಗುವ 21 ವಿಶೇಷ ಚೇತನರಿಗೆ ತ್ರಿಚಕತ್ರ ವಾಹನ ವಿತರಣೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬುಜಗಜೀವನರಾಂ, ವಾಲ್ಮೀಕಿ ಸೇರಿದಂತೆ ವಿವಿಧ ನಿಗಮಗಳಿಂದ ಕೊಡಮಾಡುವ ಸರಕು ಸಾಗಣೆ ದ್ವಿಚಕ್ರ ಯೋಜನೆಯಡಿ 70 ದ್ವಿಚಕ್ರವಾಹನ ವಿತರಣಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ವೀಕ್ಷಕನಾಗಿ ಹಲವು ಬಾರಿ ಪೂರ್ವ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಒಬ್ಬ ಜನಪ್ರತಿನಿಧಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರಕಿಸುವ ಕಾರ್ಯ ಶಾಸಕ ಅಬ್ಬಯ್ಯ ಅವರು ಮಾಡುತ್ತಿದ್ದಾರೆ. ಅದಕ್ಕೆ ಇಂದು ವಿಶೇಷ ಚೇತನರಿಗೆ ತ್ರಿಚಕ್ರ ವಿತರಿಸಿರುವುದೇ ನಿದರ್ಶನ ಎಂದು ಹೇಳಿದರು.
ಇದಕ್ಕೂ ಮೊದಲು ಶಾಸಕ ಪ್ರಸಾದ ಅಬ್ಬಯ್ಯ ಅವರು ಮಾತನಾಡಿ, ವಿಶೇಷ ಚೇತನರಿಗೆ ಅನುಕಂಪದ ಬದಲು ಸಹಕಾರದ ಅವಶ್ಯಕತೆ ಇದೆ. ಕಳೆದ 10ವರ್ಷದಲ್ಲಿ ಸುಮಾರು 200 ತ್ರಿಚಕ್ರ ವಾಹನ ವಿತರಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡಲಾಗಿದೆ. ನಮಗೆ ನೀಡಿದ ಮಿತಿಗಿಂತಲೂ ಹೆಚ್ಚು ವಿಶೇಷ ಚೇತನರ ಕಲ್ಯಾಣಕ್ಕಾಗಿ ಶ್ರಮಿಸಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರಲ್ಲೂ ಒಂದು ವಿಶೇತೆ ಇರುತ್ತದೆ. ಅದರಂತೆ ವಿಕಲಾಂಗರಲ್ಲೂ ಒಂದು ಪ್ರತಿಭೆ ಇರುತ್ತದೆ. ಯಾರೂ ಮಾಡದಂತೆ ವಿಭಿನ್ನ ಸಾಧನೆಯನ್ನು ವಿಶೇಷ ಚೇತನರು ಮಾಡಿರುವ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಆದರೆ, ಅವರಿಗೆ ಸೂಕ್ತ ಬೆಂಬಲ ನೀಡುವ ಕಾರ್ಯವಾಗಬೇಕೆಂದು ಹೇಳಿದರು.
ವಿವಿಧ ನಿಗಮಗಳಿಂದ ಸರಕು ಸಾಗಣೆ ದ್ವಿಚಕ್ರ ವಾಹನ ಮತ್ತು 21ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಡಿಸಿಸಿ ಗ್ರಾಮೀಣ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ, ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರು, ಮೋಹನ್ ಅಸುಂಡಿ, ಬಶೀರ್ ಗುಡಮಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಮೂದ್ ಕೋಳೂರು, ಮುಖಂಡರಾದ ಶಫಿ ಮುದ್ದೇಬಿಹಾಳ, ಪ್ರಭು ಪ್ರಭಾಕರ್, ಮಝರ್ ಖಾನ್, ಆರೀಫ್ ಮುಜಾವರ್, ಸೈಯದ್ ಸಲೀಂ ಮುಲ್ಲಾ, ಅಲ್ಲಾಉದ್ದಿನ್ ಮುದಗಲ್ ಮೊದಲಾದವರು ಇದ್ದರು.