ಶಾಸಕರ ಅಮಾನತು : ಬಿಜೆಪಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು23: ಅಧಿವೇಶನದಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಗೊಳಿಸಿ, ಕಾಂಗ್ರೆಸ್ ಸರಕಾರ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ನಗರದ ಡಾ.ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರು, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿಯ ಶಾಸಕರನ್ನು ಅಮಾನತ್ತುಗೊಳಿಸುವದರ ಹಿಂದೆ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ ಪ್ರದರ್ಶನವಾಗಿದೆ. ಸರಕಾರ ಅಧಿಕಾರ ದುರ್ಬಳಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಚಿತ ಯೋಜನೆಗಳ ಜಾರಿ ಉದ್ದೇಶಕ್ಕೆ ಕಾಂಗ್ರೆಸ್ ಸರಕಾರ ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಜನಪರ ಯೋಜನೆಗಳನ್ನು ರದ್ದುಪಡಿಸಿದೆ. ಬಡವರು, ಹಿಂದುಳಿದವರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಸೌಲಭ್ಯಗಳನ್ನು ಕಸಿದುಕೊಂಡಿದೆ ಎಂದು ಕಿಡಿಕಾರಿದರು. ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವ ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಬೇಕು. ದಿನಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ನೂರಾರು ಪಕ್ಷಗಳು ಒಗ್ಗಟ್ಟಾಗಿ ಹೋರಾಡಿದರೂ ನರೇಂದ್ರ ಮೋದಿ ಸೋಲಿಸಲು ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆ ಜಾರಿಗೆ ತರುವ ಘೋಷಣೆ ಮಾಡಿ ಅವುಗಳ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಆಗ್ರಹಿಸಿದರು.
ನಗರಸಭೆ ಉಪಾಧ್ಯಕ್ಷ ರೂಪೇಶ್ ಕುಮಾರ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಸಾಲಿಸಿದ್ಧಯ್ಯಸ್ವಾಮಿ, ಕೆ.ಎಸ್.ರಾಘವೇಂದ್ರ, ಬಾಗಳಿ ಕೊಟ್ರೇಶಪ್ಪ, ಮಲ್ಲಿಕಾರ್ಜುನ, ಸುಭಾμï, ಕಸಾಟ್ಟಿ ಉಮಾಪತಿ, ಶಂಕರ್ ಮೇಟಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.