ಶಾಸಕರ ಅನೈತಿಕತೆ ಹೇಳಿಕೆಗೆ ಆಕ್ರೋಶ: ಸಚಿವ ಸುಧಾಕರ್ ವಿಷಾದ

ಬೆಂಗಳೂರು, ಮಾ. 24- ‘ರಾಜ್ಯದ 225 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆಯಾಗಲಿ. ತನಿಖೆಯಾದರೆ ಎಲ್ಲರ ಬಂಡವಾಳ ಜನರಿಗೆ ತಿಳಿಯುತ್ತದೆ ಎಂದು ಬಹಿರಂಗ ಸವಾಲು ಹಾಕಿದ ಆರೋಗ್ಯ ಸಚಿವ ಸುದಾಕರ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ‌ಕುಮಾರಸ್ವಾಮಿ‌‌ ಸೇರಿದಂತೆ ಎಲ್ಲೆಡೆಯಿಂದ ಟೀಕೆ ವ್ಯಕ್ತ ವಾಗಿತ್ತು.

ಈ ಹಿನ್ನೆಲೆ ತಮ್ಮ ಹೇಳಿಕೆಗೆ ಸಚಿವ ಸುಧಾಕರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಸಂಬಂದ ಟ್ವೀಟ್ ಮಾಡಿರುವ ಅವರು ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಹದಿನೇಳು ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ.

ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಹೇಳಿಕೆಯನ್ನು ಶಬ್ದಶಃ ಅರ್ಥೈಸದೆ, ನಮ್ಮ ಸ್ಥಾನದಲ್ಲಿ ನಿಂತು, ಅದರ ಹಿಂದಿರುವ ಆಘಾತ, ವೇದನೆ, ಭಾವನೆಗಳನ್ನು ಅವಲೋಕಿಸಿ, ಅರ್ಥ ಮಾಡಿಕೊಳ್ಳಬೇಕೆಂದು ನಿವೇದನೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಕಲ ದಿನಗಳಿಂದ ಮಹತ್ವವಾಗಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಅನಾವಶ್ಯಕ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಮತ್ತು ಶಾಸಕರ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್, ರಾಜಕೀಯ ದುರುದ್ದೇಶದಿಂದ 6 ಮಂದಿ ಸಚಿವರ ತೇಜೋವಧೆ ಮಾಡಲು ಯತ್ನಿಸುತ್ತಿದೆ ಎಂದಿದ್ದಾರೆ