ಶಾಸಕರ ಅಣಿತಿಯಂತೆ ಕುಣಿಯುತ್ತಿರುವ ಇಒ

ದೇವದುರ್ಗ,ಜ.೧೮- ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಕೆ.ಶಿವನಗೌಡ ನಾಯಕರ ಅಣತಿಯಂತೆ ಕುಣಿಯುತ್ತಿದ್ದು, ಬಿಜೆಪೇತರ ಆಡಳಿತವಿರುವ ಗ್ರಾ.ಪಂ.ಗೆ ಸಮರ್ಪಕವಾಗಿ ಕ್ರಿಯಾಯೋಜನೆ ತಯಾರಿಸಿ ಅನುದಾನ ನೀಡುವಲ್ಲಿ ಭಾರಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ನರಸಣ್ಣ ನಾಯಕ ಆರೋಪಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.
ತಾ.ಪಂ. ಇಒ ಪಂಪಾಪತಿ ಹಿರೇಮಠ, ಪಂಚಾಯತ್ ರಾಜ್ ನಿಯಮಗಳನ್ನು ಗಾಳಿಗೆ ತೂರಿ ಗ್ರಾ.ಪಂ. ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಗ್ರಾಮ ಸಭೆ ನಿರ್ಣಯಗಳನ್ನು ಹಾಗೂ ಸ್ಥಳೀಯ ಆಡಳಿತದ ನಡಾವಳಿಗಳನ್ನು ಪರಿಗಣಿಸದೆ, ಬಿಜೆಪಿ ಕಾರ್ಯಕರ್ತರು ಹೇಳಿದಂತೆ ಕೇಳುತ್ತಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ನರೇಗಾ ಯೋಜನೆಯನ್ನು ಎಲ್ಲ ಗ್ರಾ.ಪಂ.ಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ತಾ.ಪಂ. ಇಒ ಪಂಪಾಪತಿ ಹಿರೇಮಠರನ್ನು ಸೇವೆಯಿಂದ ವಜಾಗೊಳಿಸಬೇಕು.
ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿ ರಾಜಕೀಯ ದುರದ್ದೇಶಕ್ಕೆ ಬಳಸಿಕೊಳ್ಳುವುದು ತಡೆಯಬೇಕು. ಅಮೃತ ಸರೋವರ ಕಾಮಗಾರಿ ಪ್ರಾರಂಭಿಸಬೇಕು. ಯೋಜನೆ ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು.
ಜಾಲಹಳ್ಳಿ ಸಂತೆ ಮಾರುಕಟ್ಟೆ ರಸ್ತೆಯಲ್ಲಿ ಚರಂಡಿ ನೀರು ಹರಿಯುವಂತೆ ಚರಂಡಿ ನಿರ್ಮಿಸಬೇಕು. ಸ್ಥಳೀಯ ಗ್ರಾ.ಪಂ.ಯಲ್ಲಿ ನಿರ್ಣಯಿಸಿದ ತೀರ್ಮಾನಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಸಕಾಲದಲ್ಲಿ ಗ್ರಾಮಸಭೆ ಮಾಡಲು ಸೂಚನೆ ನೀಡಬೇಕು. ಎಲ್ಲ ಗ್ರಾ.ಪಂ. ವ್ಯಾಪ್ತಿಗೆ ಶುದ್ಧ ಕುಡಿವ ನೀರು, ವಸತಿ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಬೇಕು.
ಕೆಪಿಟಿಟಿ ಅಧಿನಿಯಮ ೧೯೯೯ರ ೪ಎ ಅನ್ವಯ ಸರ್ಕಾರದ ನಿಯಮ ಉಲ್ಲಂಘಿಸಿ ಸಾಮಾನ್ಯ ವೆಚ್ಚದಲ್ಲಿ ಒಬ್ಬ ಏಜೆನ್ಸಿಗೆ ನೂರಾರು ಕೋಟಿ ಜಮಾವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು. ೧೫ನೇ ಹಣಕಾಸು ಯೋಜನೆ ದುರ್ಬಳಕೆ ತನಿಖೆ ನಡೆಸಬೇಕು. ಜಲಜೀವನ ಯೋಜನೆ ಸಮಗ್ರ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮಜರುಗಿಸಿ, ಯೋಜನೆ ಸಮರ್ಪಕವಾಗಿ ಜಾರಿಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಹನುಮಂತ ಗುರಿಕಾರ ಮೌನೇಶ ಜಾಲಹಳ್ಳಿ, ಶಿಬ್ಬೀರ್ ಜಾಲಹಳ್ಳಿ, ಮುಕ್ತುಂ ಪಾಷಾ, ಹನುಮಂತ ಮಡಿವಾಳ ಇದ್ದರು.