ಶಾಸಕರಿಗೆ ಖಾದರ್ ಕಿವಿಮಾತು

ಬೆಳಗಾವಿ, ಡಿ. ೧೩- ಸದನಕ್ಕೆ ತಡವಾಗಿ ಬಂದ ಸದಸ್ಯರಿಗೆ ಹಾಗೂ ಸದನದಲ್ಲಿ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳದೆ ಅಡ್ಡಾಡುತ್ತಿದ್ದ ಶಾಸಕರುಗಳ ನಡುವಳಿಕೆಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ವಲ್ಪ ಗರಂ ಆಗಿ ಶಾಸಕರಿಗೆ ಬುದ್ಧಿ ಮಾತುಗಳನ್ನು ಹೇಳಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.
ಕಾಂಗ್ರೆಸ್ ಶಾಸಕ ಹೆಚ್.ಡಿ ರಂಗನಾಥ್ ತಮ್ಮ ಆಸನ ಬಿಟ್ಟು ಸದನದಲ್ಲಿ ಅಡ್ಡಾಡುತ್ತಿದ್ದನ್ನು ಗಮನಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ನಿಮ್ಮ ಸೀಟಿಗೆ ಗಮ್ ಅಂಟಿಸಬೇಕು. ಎಲ್ಲಾದರೂ ಸಿಗುತ್ತಾ ನೋಡಿ ಎಂದು ರಂಗನಾಥ್ ರವರನ್ನು ಉದ್ದೇಶಿಸಿ ಹೇಳಿದರು.
ಪದೇ ಪದೇ ರಂಗನಾಥ್ ಅವರು ಸದನದಲ್ಲಿ ಓಡಾಡುತ್ತಿದದ್ದು ಸಭಾಧ್ಯಕ್ಷರ ಸಿಟ್ಟಿಗೆ ಕಾರಣವಾಗಿ ನಿಮ್ಮ ಸೀಟಿಗೆ ಗಮ್ ಅಂಟಿಸಬೇಕು. ಅದು ಎಲ್ಲಾದರೂ ಸಿಗುತ್ತದಾ ನೋಡಿ ಎಂದು ಹೇಳಲು ಕಾರಣವಾಯಿತು.
ತಡವಾಗಿ ಬಂದ ಶಾಸಕರಿಗೆ ಬುದ್ದಿ ಮಾತು
ಪ್ರಶ್ನೋತ್ತರ ಸಂದರ್ಭದಲ್ಲಿ ಸದನಕ್ಕೆ ತಡವಾಗಿ ಆಗಮಿಸಿದ ಬಿಜೆಪಿಯ ಶರಣರು ಸಲಗಾರ, ಜೆಡಿಎಸ್‌ನ ಶರಣಗೌಡ ಕುಂದಕೂರು, ಕಾಂಗ್ರೆಸ್‌ನ ಬಸವರಾಜು ಶಿವಗಂಗಾ ಅವರಿಗೆ ನಯವಾಗಿಯೇ ತರಾಟೆಗೆ ತೆಗೆದುಕೊಂಡ ಸಭಾಧ್ಯಕ್ಷರು ಯಾಕೆ ಇಷ್ಟು ತಡವಾಗಿ ಬರುತ್ತಿದ್ದಾರೆ ನಿಮಗೆ ಕಲಾಪ ಆರಂಭ ಸಮಯ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.
ಶಾಸಕರು ತಡವಾಗಿ ಬಂದಿದ್ದಕ್ಕೆ ತಮ್ಮದೇ ಆದ ಕಾರಣಗಳನ್ನು ಹೇಳಿದರಾದರೂ ಸಭಾಧ್ಯಕ್ಷರು ಇವೆಲ್ಲಾ ಬೇಡ ಸಮಯಕ್ಕೆ ಸರಿಯಾಗಿ ಆಗಮಿಸಿ ನಿಮ್ಮ ಪ್ರಶ್ನೆಗಳನ್ನು ಕೇಳಿ, ಸದನದಲ್ಲಿ ಹಿರಿಯರುಗಳೆಲ್ಲಾ ಸದನಕ್ಕೆ ಸರಿಯಾಗಿ ಬರುತ್ತಾರೆ ನೀವೆಲ್ಲಾ ಹೀಗಾದರ ಹೇಗೆ ಎಂದು ಬುದ್ದಿ ಮಾತು ಹೇಳಿದರು.