ಹುಬ್ಬಳ್ಳಿ,ಜೂ14 : ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ವೀಕ್ಷಣೆಗೂ ಮುನ್ನ ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಬಿ. ಹಾಗೂ ಹು-ಧಾ ಸೆಂಟ್ರಲ್ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಕ್ರೀಡಾಂಗಣದಲ್ಲಿ ಸ್ಥಳೀಯ ಆಟಗಾರರೊಂದಿಗೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ನೋಡುಗರ ಗಮನ ಸೆಳೆದರು.
ಈ ವೇಳೆ ಕ್ರೀಡಾಂಗಣದಲ್ಲಿ ಹು-ಧಾ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಿಜೆಪಿ ಮುಖಂಡರಾದ ರವಿ ನಾಯಕ್, ಮಹೇಂದ್ರ ಕೌತಾಳ ಹಾಗೂ ಆಮ್ ಆದ್ಮಿ ಪಕ್ಷದ ಬಸವರಾಜ್ ತೇರದಾಳ ಸೇರಿದಂತೆ ಪ್ರಮುಖರು ಸಾಥ್ ನೀಡಿದರು.
ನಂತರ ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಬಿ. ಅವರ ನೇತೃತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಕುರಿತಂತೆ ನಗರದ ನೆಹರೂ ಕ್ರೀಡಾಂಗಣ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಶಾಸಕ ಮಹೇಶ ತೆಂಗಿನಕಾಯಿ, ಈಗಾಗಲೇ ಎಲ್ಲ ಇಲಾಖೆಯ ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದೇನೆ. ಅದರಂತೆ ಯಾವ ಯಾವ ಇಲಾಖೆಯಲ್ಲಿ ಸಮಸ್ಯೆ ಆಗಿದೆ ಅದನ್ನು ವೀಕ್ಷಿಸಿ ಪರಿಹಾರ ಕ್ರಮ ಕೈಗೊಳ್ಳುವ ತಿರ್ಮಾಣ ಮಾಡಲಾಗಿದೆ. ಈಗಾಗಲೇ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಮಾರ್ಟ್ ಸಿಟಿ 35 ಕಾಮಗಾರಿ ಕೈಗೆತ್ತಿಕೊಂಡಿದೆ. ಅದರಲ್ಲಿ 32 ಕಾಮಗಾರಿಗಳನ್ನು ಸಂಪೂರ್ಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡುತ್ತಿದ್ದೇನೆ. ಬಳಿಕ ಪಾಲಿಕೆಗೆ ಹಸ್ತಾಂತರ ಮಾಡಿಕೊಡಲಾಗುವುದು ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಪಾಲಿಕೆ ಮೇಯರ್ ಲೋಕಾಯುಕ್ತಕ್ಕೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತ, ಈ ವಿಷಯ ಗಮನಕ್ಕೆ ಬಂದಿದೆ. ನಾನು ಪಾಲಿಕೆ ಮೇಯರ್ ಅವರೊಂದಿಗೆ ಮಾತನಾಡುವೆ. ಶಾಸಕನಾದ ಬಳಿಕ ಮೊದಲ ಬಾರಿಗೆ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದೇನೆ. ಸ್ಮಾರ್ಟ್ ಸಿಟಿ ಕಾಮಗಾರಿ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಪಾಲಿಕೆ ಆಯುಕ್ತರು ಸಹ ಈ ಬಗ್ಗೆ ತಿಳಿಸಿದ್ದಾರೆ. ಈವರೆಗೆ ಯಾವುದು ಕಾಮಗಾರಿ ಕೂಡಾ ಹಸ್ತಾಂತರ ಆಗಿಲ್ಲ. ಕೂಲಂಕುಷವಾಗಿ ಕಾಮಗಾರಿ ಪರಿಶೀಲಿಸಿ ಹಸ್ತಾಂತರ ಮಾಡಲಾಗುವುದು ಎಂದು ಅವರು ತಿಳಿಸಿದರು.