
ಪಿರಿಯಾಪಟ್ಟಣ: ಮಾ.06:- ಚುನಾಯಿತ ಪ್ರತಿನಿಧಿಗಳು ಜನಸಾಮಾನ್ಯರ ಬೇಡಿಕೆ ಈಡೇರಿಸದಿದ್ದಲ್ಲಿ ರಾಜಕಾರಣದಿಂದ ದೂರ ಉಳಿಯಬೇಕು ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
ತಾಲೂಕಿನ ಅಳ್ಳೂರು ವದನಕುಪ್ಪೆ ಮತ್ತು ಮಾಲಂಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನಾನು ಕಳೆದ ಚುನಾವಣಾ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಟ್ಟ ಬೇಡಿಕೆಗಳನ್ನು ಕಳೆದ ಐದು ವರ್ಷಗಳಿಂದ ಪ್ರತಿ ಇಲಾಖೆಯಿಂದಲೂ ಅನುದಾನ ತಂದು ಹಂತ ಹಂತವಾಗಿ ಪೂರೈಸುತ್ತಾ ಬಂದಿದ್ದೇನೆ.
ಆದರೆ ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸಿದ ಮಾಜಿ ಶಾಸಕ ಕೆ.ವೆಂಕಟೇಶ್ ಜನರ ಸಂಕಷ್ಟಗಳಿಗೆ ಸ್ಪಂದಿಸದೆ ಐಷಾರಾಮಿ ಜೀವನವನ್ನು ನಡೆಸುತ್ತಾ ಕಾಲ ಹರಣ ಮಾಡಿದ್ದರು.ಇವರ ಅವಧಿಯಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇವರಿಗೆ ಮತದಾನ ಮಾಡಿದ ತಾಲೂಕಿನ ಜನತೆಯು ಕೂಡ ಅಂದು ಮತ ನೀಡಿದ ತಪ್ಪಿಗಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲೇ ಇದ್ದ ಇವರು ಚುನಾವಣೆ ಸಮೀಪಿಸುತ್ತಿದ್ದಂತೆ ಇಲ್ಲಸಲ್ಲದ ಆರೋಪ ಮಾಡುತ್ತಾ ಕಾಂಗ್ರೆಸ್ ಪಕ್ಷಕ್ಕೆ ಮತಯಾಚನೆ ಮಾಡುತ್ತಿದ್ದಾರೆ. ಇದನ್ನು ತಾಲೂಕಿನ ಜನತೆ ಅರ್ಥಮಾಡಿಕೊಳ್ಳಬೇಕು. ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕಯೇ ಪ್ರಶ್ನಿಸಬೇಕು ಎಂದರು.
ನಾನು ಶಾಸಕನಾದ ನಂತರ ತಾಲೂಕಿನಲ್ಲಿ ರೈತರಿಗೆ ವ್ಯವಸಾಯ ಮತ್ತು ಕುಡಿಯಲು ಯೋಗ್ಯವಾದ ಕಾವೇರಿ ನೀರಿನ ಸರಬರಾಜು ಯೋಜನೆಯನ್ನು ಜಾರಿ ಗೊಳಿಸಿದ್ದೇನೆ. ನಿರ್ಗತಿಕರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದೇನೆ. ಕೈಗಾರಿಕರಣ ಪ್ರಾರಂಭಿಸಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಶ್ರಮಿಸಿದ್ದೇನೆ.ಗ್ರಾಮೀಣ ಭಾಗದ ಜನತೆಗೆ ವಿದ್ಯುತ್ ಸರಬರಾಜು, ಉತ್ತಮ ರಸ್ತೆ ನಿರ್ಮಾಣ, ಶಾಲಾ ಕೊಠಡಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಅನುದಾನ ಸೇರಿದಂತ್ತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ. ಈ ಬೆಳವಣಿಗೆಯು ಅವರಿಗೆ ಶ್ರೇಯಸ್ಸನ್ನು ತರುವುದಿಲ್ಲ ಎಂದು ದೂರಿದರಲ್ಲದೆ. ಮುಂದಿನ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿದ್ದು ನನ್ನ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟು ನನಗೆ ಮತ ನೀಡಿ ತಾಲೂಕಿನ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿಶ್ವನಾಥ್, ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ತಿಮ್ಮೇಗೌಡ, ಮುಖಂಡರಾದ ವೀರೇಂದ್ರ ಕುಮಾರ, ಹರೀಶ್, ಚಿಕ್ಕೇಗೌಡ, ಲಕ್ಷ್ಮೇಗೌಡ, ಶಿವಣ್ಣ, ತಹಸೀಲ್ದಾರ್ ಯಧುಗಿರೀಶ್, ಪಶುಪಾಲನ ಇಲಾಖೆಯ ಸೋಮಯ್ಯ, ಜಿ ಪಂ ಅಭಿಯಂತರ ಮಲ್ಲಿಕಾರ್ಜುನ,ಪಾಷ,ಪಿಡಿಓ ಡಾ. ಆಶಾ, ರಾಜಸ್ವ ನೀರಿಕ್ಷಕ ಪಾಂಡು, ಪ್ರದೀಪ್ ಸೇರಿದಂತ್ತೆ ಮತಿತ್ತರರು ಹಾಜರಿದ್ದರು.