ಶಾಸಕರಿಂದ ಜಗಜೀವನ್ ರಾಮ್ ಜನ್ಮ ದಿನ ಉದ್ಘಾಟನೆ

ಕೋಲಾರ,ಏ.೬:ಕೋಲಾರ ಜಿಲ್ಲೆ ಕೆಜಿಎಫ್ ನಗರಸಭೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ರವರ ೧೧೪ನೇ ಜನ್ಮ ದಿನಾಚರಣೆ ಸಮಾರಂಭವನ್ನ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಬಾಬೂಜಿ ಯವರ ೧೧೪ನೇ ಜಯಂತಿಯನ್ನು ಪ್ರಥಮ ಬಾರಿ ಕೆ.ಜಿ.ಎಫ್. ತಾಲ್ಲೂಕಿನ ಆಚರಿಸುತ್ತಿರುವುದು ತುಂಬ ಸಂತಸ ತಂದಿದೆ ಎಂದರು. ಕೋವಿಡ್ ನಿಯಮಾವಳಿಯ ಪ್ರಕಾರ ಸರಳವಾಗಿ ಆಚರಿಸಲಾಗಿದ್ದು ಮುಂದಿನ ದಿನಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.
ಬಾಬುಜಿರವರು ಬಿಹಾರದ ಒಂದು ಕುಗ್ರಾಮದಲ್ಲಿ ಬಡ ದಲಿತ ಕುಟುಂಬದಲ್ಲಿ ಜನಿಸಿ ವಿದ್ಯಾರ್ಥಿ ದೆಸೆಯಿಂದಲೂ ಹೋರಾಟದ ದಾರಿ ಹಿಡಿದು ಜೀವನದಲ್ಲಿ ಸಾಕಷ್ಟು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರು.
ಅಂದಿನ ದಿನಗಳಲ್ಲಿ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಾಲಾ ದಿನಗಳಿಂದಲೂ ಹೋರಾಟ ನಡೆಸಿದರು ಎಂದು ತಿಳಿಸಿದರು.
ಹಸಿರು ಕ್ರಾಂತಿಯ ಹರಿಕಾರರು ಎಂದೇ ಖ್ಯಾತರಾಗಿರುವ ಬಾಬೂಜಿರವರು ವಿವಿಧ ಸರ್ಕಾರದ ಅವಧಿಯಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದವರು.
ಇಂತಹ ಮಹಾನ್ ನಾಯಕರು ನಡೆದು ಬಂದ ಹಾದಿಯನ್ನು ಇಂದಿನ ಯುವ ಪೀಳಿಗೆ ಅನುಸರಿಸಬೇಕಾದ ಅವಶ್ಯಕತೆ ಇರುತ್ತದೆ.
ಬಾಬೂಜಿ ರವರಂತ ಮಹಾನ್ ನಾಯಕರ ಸ್ಮರಣೆಯನ್ನು ಮಾಡುವಂತ ಕೆಲಸ ಕೇವಲ ಒಂದು ಸಮುದಾಯಕ್ಕೆ ಮೀಸಲಾಗಬಾರದು, ಅವರ ಕೊಡುಗೆ ಇಡೀ ಸಮಾಜಕ್ಕೆ ಆಗಿರುವುದರಿಂದ ಎಲ್ಲ ವರ್ಗದವರು, ಸಮುದಾಯದವರು ಅವರುಗಳನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಎಲ್ಲಾ ಇಲಾಖಾ ಮುಖ್ಯಸ್ಥರು, ಜನಪ್ರತಿನಿಧಿಗಳು, ವಿವಿದ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.