ಶಾಸಕರಿಂದ ಕಾಮಗಾರಿ ಪರಿಶೀಲನೆ

ಚಿಕ್ಕನಾಯಕನಹಳ್ಳಿ, ಜೂ. ೧೭- ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆಯನ್ನು ಶಾಸಕ ಸಿ.ಬಿ. ಸುರೇಶ್‌ಬಾಬು ನಡೆಸಿದರು.
ಪಟ್ಟಣದ ಪುರಸಭೆಯಲ್ಲಿ ವಿಶೇಷ ಸಭೆ ನಡೆಸಿದ ಶಾಸಕರು ಪಟ್ಟಣದಲ್ಲಿ ಆಗಬೇಕಿರುವ ತುರ್ತು ಕೆಲಸಗಳ ಮಾಹಿತಿಯನ್ನು ಸದಸ್ಯರಿಂದ ಪಡೆದರು.
ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಸಂಚಾರ, ನೀರಿನ ಸರಬರಾಜು ಹಾಗೂ ಚರಂಡಿಗಳ ವ್ಯವಸ್ತೆಗೆ ಧಕ್ಕೆ ಬಂದಿರುವ ಬಗ್ಗೆ ಸದಸ್ಯರು ದೂರಿದರು. ಮನೆಯಿಲ್ಲದ ಕಡು ಬಡವರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಕಟ್ಟಿ ಕೊಡುವ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಬಂದ ದೂರಿನನ್ವಯ, ಪಟ್ಟಣದಲ್ಲಿ ವಿವಿಧ ಯೋಜನೆಯಡಿ ನಡೆದಿರುವ ಎಲ್ಲಾ ಕಾಮಗಾರಿಗಳ ಸ್ಥಳ ಪರಿಶೀಲನೆಯನ್ನು ನಡೆಸಿದರು.
ಸಂಬಂಧಿಸಿದ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ಯುಜಿಡಿ, ರಸ್ತೆ ಹಾಗೂ ವಸತಿಗಳ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ, ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪುರಸಭಾ ಸದಸ್ಯರು ಪಾಲ್ಗೊಂಡಿದ್ದರು.