ಶಾಸಕರಿಂದ ಕಟ್ಟಡ ಕಾಮಗಾರಿ ಪರಿಶೀಲನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.31:- ತಾಲ್ಲೂಕಿನ ಬೂಕನಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಯನ್ನು ಶಾಸಕ ಹೆಚ್.ಟಿ.ಮಂಜು ಪರಿಶೀಲನೆ ನಡೆಸಿದರು.
ಯಾವುದೇ ಕಾಮಗಾರಿ ಆಗಿರಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯವಾಗಿದ್ದು ಲಕ್ಷಾಂತರ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಕಟ್ಟಡಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಧೀರ್ಘಕಾಲ ಬಾಳಿಕೆ ಬರುವಂತಿರಬೇಕು. ಗುತ್ತಿಗೆದಾರರು ಸ್ವಲ್ಪವೂ ಲೋಪವಾಗದಂತೆ ಎಚ್ಚರವಹಿಸಿ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಮುಗಿಸಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಬೂಕನಕೆರೆ ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲಿನ ನೂರಾರು ಗ್ರಾಮಗಳ ಸಾರ್ವಜನಿಕರು ಈ ಆಸ್ಪತ್ರೆಗೆ ಆರೋಗ್ಯ ಪರೀಕ್ಷೆಗಾಗಿ ಭೇಟಿ ನೀಡುತ್ತಾರೆ.
ಆಸ್ಪತ್ರೆಯಲ್ಲಿ ಸ್ವಚ್ಚತೆ, ಕುಡಿಯುವ ನೀರು ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ಎಚ್ಚರವಹಿಸಬೇಕು. ಅನಾವಶ್ಯಕವಾಗಿ ಔಷಧಿ, ಮಾತ್ರೆಗಳನ್ನು ಹೊರಗಿನ ಅಂಗಡಿಗಳಿಗೆ ಬರೆದುಕೊಡಬಾರದು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸಗೌಡರಿಗೆ ಸೂಚಿಸಿದರು.
ಇದೇ ಸಂಧರ್ಭದಲ್ಲಿ ತಾಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಹುಲ್ಲೇಗೌಡ, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಬೂಕನಕೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸಗೌಡ, ರೇವಣ್ಣ, ಶಾಸಕರ ಆಪ್ತಸಹಾಯಕ ಪ್ರತಾಪ್ ಸೇರಿದಂತೆ ಹಲವರಿದ್ದರು.