ಶಾಸಕರರಿಂದ ಹಣ ಲೂಟಿ – ದುರಸ್ತಿಯಾಗದಿದ್ದರೆ ಹೋರಾಟ

ನಗರದಲ್ಲಿ ಹದಗೆಟ್ಟ ರಸ್ತೆ : ಗುಂಡಿ, ಧೂಳು – ಸಂಚಾರ ನರಕ
ರಾಯಚೂರು.ಜು.೧೮- ನಗರದ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣವಾಗಿ ಹದಗೆಟ್ಟು, ಜನರು ತೀವ್ರ ತೊಂದರೆ ಎದುರಿಸುತ್ತಿದ್ದರೂ, ನಗರಸಭೆ ಮತ್ತು ಶಾಸಕರು ಗಮನ ಹರಿಸದಿರುವ ಬಗ್ಗೆ ಜೆಡಿಎಸ್ ಪಕ್ಷದ ಮುಖಂಡರಾದ ರಾಮನಗೌಡ ಏಗನೂರು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬಹುತೇಕ ಪ್ರಮುಖ ರಸ್ತೆಗಳೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕಾಮಗಾರಿಗಳ ಹೆಸರಲ್ಲಿ ಅವೈಜ್ಞಾನಿಕ ಟೆಂಡರ್ ಪ್ರಕ್ರಿಯೆ ನಡೆಸಿ, ಕಳಪೆ ಕಾಮಗಾರಿ ಮೂಲಕ ಶಾಸಕರು, ಅಧಿಕಾರಿಗಳು ಮತ್ತು ಗುತ್ತೇದಾರರು ಕೋಟ್ಯಾಂತರ ರೂ. ಲೂಟಿ ಮಾಡುತ್ತಿರುವುದರ ಪರಿಣಾಮ ನಗರದ ರಸ್ತೆಗಳು ಈ ರೀತಿ ಗುಂಡಿಗಳಿಂದ ತುಂಬಲು ಕಾರಣವಾಗಿವೆ. ತೀನ್ ಖಂದಿಲ್, ಪಟೇಲ್ ರಸ್ತೆ, ಚಂದ್ರಮೌಳೇಶ್ವರ ರಸ್ತೆ, ಶೆಟ್ಟಿಬಾವಿ ಚೌಕ್, ಬಟ್ಟೆ ಬಜಾರ ಹೀಗೇ ಪ್ರಮುಖ ರಸ್ತೆಗಳು ಮತ್ತು ವರ್ತುಲ ರಸ್ತೆಗಳಾದ ಬಂಗಿಕುಂಟಾ, ಶಂಕರಗೌಡ ಆಸ್ಪತ್ರೆ ಎದುರಿನ ರಸ್ತೆ ಹೀಗೆ ನಗರದ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾಲಕರು ನಿತ್ಯ ಈ ರಸ್ತೆಗಳಲ್ಲಿ ಓಡಾಡಲು ಭಾರೀ ಸಮಸ್ಯೆಯಾಗಿ ಅಪಘಾತಗಳಿಗೆ ದಾರಿ ಮಾಡಿದೆ.
ಸಿಟಿ ಬಸ್ ಓಡಾಡಲು ನಗರದಲ್ಲಿ ಸುಸ್ತಿರ ಸ್ಥಳಗಳಿಲ್ಲ. ಅತಿಯಾದ ಗುಂಡಿಗಳಿಂದ ವಾಹನ ಸವಾರರ ಬೆನ್ನುಮೂಳೆ ದುರ್ಬಲಗೊಳ್ಳುವಂತಹ ಪರಿಸ್ಥಿತಿಗೆ ಇಲ್ಲಿಯ ಆಡಳಿತ ವ್ಯವಸ್ಥೆ ಕಾರಣವಾಗಿದೆ. ರಸ್ತೆಗೆ ಡಾಂಬರ ಮತ್ತು ಸಿಮೆಂಟ್ ಹಾಕದಿರುವ ಕಾರಣ, ಧೂಳಿನಿಂದ ಜನರ ಆರೋಗ್ಯ ಮೇಲೆ ಭಾರೀ ತೀವ್ರ ಪರಿಣಾಮ ಬೀರುವಂತಾಗಿದೆ. ದೊಡ್ಡ ವಾಹನ ಸಂಚರಿಸಿದರೆ, ಜನರು ಧೂಳಿನಲ್ಲಿಯೆ ಸಂಚರಿಸುವಂತಹ ಪರಿಸ್ಥಿತಿ ನಗರದಲ್ಲಿದೆ. ಕೆಲವೆಡೆ ಮರಂ ಹಾಕಿ ಬಿಟ್ಟ ಬಿಡಲಾಗಿದೆ. ಇದರಿಂದ ಮಳೆಗಾಲದಲ್ಲಿ ಮರಂ ಹೊಂಡು ಪ್ರದೇಶವಾಗಿ ಮಾರ್ಪಟ್ಟು, ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾದಚಾರಿಗಳ ಪಾಂಡತೂ ಕೇಳಲು ಸಾಧ್ಯವಿಲ್ಲ. ಗಾಂಧಿ ಸರ್ಕಲ್ ಸೇರಿದಂತೆ ನಗರದ ಯಾವ ರಸ್ತೆಗಳು ಸುರಕ್ಷಿತ ಮತ್ತು ಧೂಳುಮುಕ್ತವಾಗಿಲ್ಲ. ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಪಾಟೀಲ್ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಬರೀ ಸುಳ್ಳುಗಳನ್ನೆ ಹೇಳುತ್ತಿದ್ದಾರೆ. ಮಳೆಗಾಲ ಮುಗಿದ ತಕ್ಷಣ ರಸ್ತೆಗಳ ಅಭಿವೃದ್ಧಿ ಆರಂಭ ಎಂದು ಕಳೆದ ಮೂರು ವರ್ಷಗಳಿಂದ ಹೇಳುತ್ತಲೇ ಬರುತಿದ್ದಾರೆ. ಆದರೆ, ಜನರು ಮಾತ್ರ ಅತ್ಯಂತ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವ ತೊಂದರೆ ಅನುಭವಿಸತ್ತಲೆ ಇದ್ದಾರೆ.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಕ್ಷಣವೆ ಜನರ ಈ ಸಮಸ್ಯೆ ಮನಗಂಡು ಕೂಡಲೆ ಕ್ರಮಕ್ಕೆ ಮುಂದಾಗಬೇಕಾಗಿದೆ. ಜನರ ಆರೋಗ್ಯದ ಜೊತೆಗೆ ವಾಣಿಜ್ಯ ವ್ಯವಹಾರಕ್ಕೂ ದುಸ್ಥಿತಿ ರಸ್ತೆಗಳಿಂದ ಹೊಡೆತ ಬಿದ್ದಿದೆ ಎಂಬುದು ಅರಿಯಬೇಕು. ರಸ್ತೆಗಳ ದುಸ್ಥಿತಿ ಬಗ್ಗೆ ಇದೇ ರೀತಿಯ ಉದಾಸೀನ ನಿಲುವು ಹೊಂದಿದ್ದರೆ, ಉಗ್ರ ಹೋರಾಟ ರೂಪಿಸಬೇಕಾಗುತ್ತದೆ. ಜನ ರೊಚ್ಚಿಗೆಳುವ ಪೂರ್ವ ರಸ್ತೆಗಳ ದುರಸ್ತಿಗೆ ಆಗ್ರಹಿಸಿದ್ದಾರೆ.