ಶಾಸಕದ್ವಯರಿಂದ ಕೋವಿಡ್ ಕೇರ್ ಸೆಂಟರ್ ಕಾಮಗಾರಿ ಪರಿಶೀಲನೆ

ಹೊಸನಗರ.ಮೇ.೨೦: ಮಹಾಮಾರಿ ಕೋವಿಡ್-19 ರೋಗ ತಾಲೂಕಿನಾದ್ಯಂತ ಹರಡುತ್ತಿರುವ ಹಿನ್ನಲೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಜಂಟಿಯಾಗಿ ಇಲ್ಲಿನ ದೇವರಾಜ ಅರಸು ಭವನದಲ್ಲಿ ಕೈಗೊಂಡಿರುವ ಕೊರೋನ ಕೇರ್ ಸೆಂಟರಿನ ಅಗತ್ಯ ಕಾಮಗಾರಿಯನ್ನು ಪರಿಶೀಲಿಸಿದರು.
 ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೊರೋನಾ ರೋಗವನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಶಸ್ವಿಯಾಗಿ ತಡೆಯಲು ಪಿಡಿಓಗಳ ಸೂಕ್ತವಾಗಿ ಶ್ರಮಿಸಬೇಕೆಂದರು. ರೋಗ ಉಲ್ಬಣಿಸುವ ಸಂದರ್ಭ ಒದಗಿ ಬಂದಲ್ಲಿ ಇಡೀ ಗ್ರಾಮವನ್ನೇ ಕ್ವಾರಂಟೈನ್ ಮಾಡಿ, ರೋಗಿಗಳಿಗೆ ಅಗತ್ಯ ಔಷಧೋಪಚಾರ ನೀಡಿ, ರೋಗ ತಡೆಗೆ ಸೂಕ್ತವಾಗಿ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರ ತಾಲೂಕಿನಲ್ಲಿ ಒಂದು ಲಕ್ಷದ ಹದಿನೈದು ಸಾವಿರ ಜನಸಂಖ್ಯೆಯಿದ್ದು ರೋಗ ಪೀಡಿತರ ಪಾಸಿಟಿವ್ ಸಂಖ್ಯೆ ಶೇ. ಒಂದಾಗಿದೆ. ಬುಡಮಟ್ಟದಲ್ಲೇ ರೋಗ ನಿಗ್ರಹಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕಾಗಿ ಅಂಗನವಾಡಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ವಿದ್ಯುತ್ ಇಲಾಖೆಯ ‘ಲೈನ್ ಮನ್’ಗಳನ್ನು ಸಹ ‘ಪ್ರೆಂಟ್‌ಲೈನ್ ವಾರಿರ‍್ಸ್’ ಗಳೆಂದು ಪರಿಗಣಿಸುವಂತೆ ಈಗಾಗಲೇ ಸರ್ಕಾರಕ್ಕೆ ತಾವು ಮನವಿ ಮಾಡಿರುವುದಾಗಿ ತಿಳಿಸಿದರು.ಆಕ್ಸಿಜನ್ ಹಾಗೂ ಇತರೆ ವೈದ್ಯಕೀಯ ಪರಿಕರಗಳು ಲಭ್ಯವಾದ ಬಳಿಕ ವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಿ, ಇನ್ನೆರಡು ಮೂರು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾಗಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.ತಾಲೂಕಿನ ಒಟ್ಟು 35 ಗ್ರಾಮಗಳನ್ನು ಕ್ವಾರಂಟೈನ್ ಗ್ರಾಮಗಳೆಂದು ಗುರುತಿಸಿ, ಮುಂದಿನ ಏಳು ದಿನಗಳ ಕಾಲ ಜನ ಸಂಚಾರಕ್ಕೆ ನಿಷೇಧ ಹೇರಲು ತಾಲೂಕು ಆಡಳಿತ ನಿರ್ಧರಿಸಿದ್ದು, ಗ್ರಾಮಸ್ಥರಿಗೆ ಅಗತ್ಯ ಸಾಮಾಗ್ರಿಗಳ ಪೂರೈಕೆಗೆ ಸಹ ಮುಂದಾಗಿದೆ ಅಲ್ಲದೆ, ಒಟ್ಟು 379 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದು, ಅವರ ಆರೋಗ್ಯದ ಮೇಲೆ ಸ್ಥಳೀಯ ಆರೋಗ್ಯ ಸಹಾಯಕಿಯರು ನಿಗ ವಹಿಸಿದ್ದಾರೆ ಎಂದು ತಾಲೂಕು ಪಂಚಾಯತಿ ಇಓ ಪ್ರವೀಣ್ ಕುಮಾರ್ ಸಭೆಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಸೇವಾ ಭಾರತಿ ಕೋವಿಡ್ ಸುರಕ್ಷಾ ಪಡೆವತಿಯಿಂದ ರೋಗಿ ಹಾಗೂ ಪರಿಚಾರಕರಿಗೆ ನಿರಂತರವಾಗಿ ಊಟೋಪಚಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರಯಿತು.ಉಪ ವಿಭಾಗಾಧಿಕಾರಿ ನಾಗರಾಜ್, ತಹಶೀಲ್ದಾರ್ ವಿ.ಎಸ್. ರಾಜೀವ್, ತಾ.ಪಂ. ಅಧ್ಯಕ್ಷ ಆಲುವಳ್ಳಿ ವೀರೇಶ್, ಸಿಪಿಐ ಮಧುಸೂಧನ್, ಶಿP್ಪ್ಷಣಾಧಿಕಾರಿ ವೀರಭದ್ರಪ್ಪ, ಮುಖ್ಯಾಧಿಕಾರಿ ಬಾಲಚಂದ್ರಪ್ಪ,  ಮಲ್ಲಿಕಾರ್ಜುನ್, ತಾಲೂಕು ವೈದ್ಯಾಧಿಕಾರಿ ಡಾ. ಸುರೇಶ್, ಡಾ. ಶಾಂತರಾಜ್, ಮೆಸ್ಕಾಂ ಎಇಇ ಚಂದ್ರಶೇಖರ್, ಮೊದಲಾದವರು ಇದ್ದರು.