ಶಾಶ್ವತ ಸ್ನೇಹ ಕಾಪಾಡುವುದು ಒಂದು ಕೌಶಲ

ಕಲಬುರಗಿ,ಜು.30: ಪರಸ್ಪರ ನಂಬಿಕೆ, ಪ್ರೀತಿ, ಅನ್ಯೋನ್ಯತೆ ಮತ್ತು ಆತ್ಮೀಯತೆ ಇವು ಶಾಶ್ವತ ಸ್ನೇಹತೆಗೆ ಪೂರಕವಾಗುವ ಅಂಶಗಳು. ಪರಸ್ಪರ ಮುಕ್ತ ಮನಸ್ಸಿನ ಚರ್ಚೆ ಮಾಡುವುದರಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಉತ್ತಮ ಸ್ನೇಹಿತ, ಉತ್ತಮ ಮಾರ್ಗದರ್ಶಿಯಾಗುತ್ತಾನೆ. ಸ್ನೇಹಿತರು ಸುಖ-ದುಃಖಗಳಲ್ಲಿ ಸಮಭಾಗಿಯಾಗಿ ಪಾಲ್ಗೊಳ್ಳುವಿಕೆ, ಪರಸ್ಪರ ಯಶಸ್ಸಿಗೆ ಶ್ರಮಿಸುವುದು ಉತ್ತಮ ಮತ್ತು ಶಾಶ್ವತ ಸ್ನೇಹತೆಯನ್ನು ಕಾಪಾಡುವುದು ಒಂದು ಕೌಶಲವಾಗಿದೆ ಎಂದು ಚಿಂತಕ ಬಸಯ್ಯಸ್ವಾಮಿ ಹೊದಲುರ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಸ್ನೇಹಿತರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡುತ್ತಾ, ಸ್ನೇಹ ಒಂದು ಪವಿತ್ರವಾದ ನಂಟು. ಇದು ಸಂಬಂಧವನ್ನು ಬೆಸೆಯುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಬಹು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗಬೇಕು. ಸ್ವಾರ್ಥಪರ ಚಿಂತನೆ, ಸಂಶಯಗಳು, ಶಾಶ್ವತ ಸ್ನೇಹಕ್ಕೆ ಧಕ್ಕೆ ತರುವ ಅಂಶಗಳು. ದುರಾಭಿಮಾನವು ಸ್ನೇಹದ ಬಿರುಕಿಗೆ ಕಾರಣವಾಗಬಹುದು. ಸ್ವಾರ್ಥ ಹಾಗೂ ವ್ಯವಹಾರಿಕ ಉದ್ದೇಶದ ಸ್ನೇಹ ಅಪಾಯಕಾರಿಯಾಗಿದೆ. ಪ್ರತಿಯೊಬ್ಬರು ಪರಸ್ಪರ ಸ್ನೇಹಭಾವದಿಂದ ಬದುಕಿದರೆ, ಜೀವನ ಸುಗಮವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಟ್ಯೂಟೋರಿಯಲ್ಸ್‍ನ ಅಮರ ಜಿ.ಬಂಗರಗಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಶಿಕ್ಷಕರಾದ ಪ್ರಕಾಶ ಸರಸಂಬಿ, ಶರಣಬಸಪ್ಪ ಮಲಶೆಟ್ಟಿ ಹಾಗೂ ವಿದ್ಯಾರ್ಥಿಗಳಿದ್ದರು.