ರಾಯಚೂರು,ಜೂ.೨೫-
ರಾಂಪೂರ ಜಲಾಷಯದಲ್ಲಿ ನೀರಿನ ಕೊರತೆಯಿಂದಾಗಿ ಕಳೆದ ತಿಂಗಳಿನಿಂದ ರಾಯಚೂರು ನಗರದ ಜನತೆಗೆ ಸರಿಯಾಗಿ ಕುಡಿಯುವ ನೀರು ಬಂದಿರಲಿಲ್ಲ. ನಿನ್ನೆ ತುಂಗಭದ್ರ ಜಲಾಷಯದಿಂದ ರಾಂಪೂರ ಜಲಾಷಯಕ್ಕೆ ನೀರು ಬಿಡಲಾಗಿದ್ದು ಸಮರ್ಪಕವಾಗಿ ನೀರು ಪೂರೈಸಲು ನಗರಸಭೆ ಆಯುಕ್ತರಾದ ಗುರಲಿಂಗಪ್ಪ ಸೇರಿ ಸಂಬಂದಿಸಿದ ಅಧಿಕಾರಿಗಳೊಂದಿಗೆ ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು ಸುಧೀರ್ಘವಾಗಿ ಚರ್ಚಿಸಿದರು.
ರಾಯಚೂರಿನ ರಾಂಪೂರ ಜಲಾಷಯಕ್ಕೆ ಹಾಗೂ ಜಲ ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳೊಂದಿಗೆ ನಗರಸಭೆ ಸದಸ್ಯರು ಭೇಟಿ ನೀಡಿ ಸಮರ್ಪಕ ನೀರು ಪೂರೈಕೆ ಬಗ್ಗೆ ಸುಧೀರ್ಗವಾಗಿ ಮಾತನಾಡಿದರು. ಈ ಕುರಿತು ತುಂಗಭದ್ರ ಜಲಾಷಯದಿಂದ ನೀರುಬಿಡುವಂತೆ ಸಿಎಂ ಹಾಗೂ ಸಂಬಂದಿಸಿದ ಸಚಿವರೊಂದಿಗೆ ಚರ್ಚಿಸಲಾಗಿತ್ತು. ಅಂತೆಯೇ ನಿನ್ನೆ ತುಂಗಭದ್ರ ಜಲಾಷಯದಿಂದ ಬಂಗಾರಪ್ಪ ಕೆರೆಗೆ, ರಾಂಪೂರ ಜಲಾಷಯಕ್ಕೆ ನೀರು ಬಿಡಲಾಗಿದೆ ಎಂದು ರವಿ ಬೋಸರಾಜು ಅವರು ಅಧಿಕಾರಿಗಳಿಗೆ ತಿಳಿಸಿದರು.
ಈಗಾಗಲೆ ನಗರದಲ್ಲಿ ಕಲುಷಿತ ನೀರು ಪೂರೈಕೆಯಿಂದಾಗಿ ಜನರು ನೀರು ಕುಡಿದು ಅನೇಕ ಸಾವು-ನೋವುಗಳನ್ನು ಅನುಭವಿಸಿದ್ದಾರೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಸೌಲಭ್ಯಗಳು ಸೇರಿ ಜಲ ಶುದ್ದೀಕರಣ ಘಟಕದ ಸ್ವಚ್ಚತೆಯನ್ನು ಕಾಯ್ದಿರಿಸಿ ಪ್ರತಿದಿನ ನೀರು ತಪಾಸಣೆ ಮಾಡಿ ನೀರು ಸರಬರಾಜು ಮಾಡುವಂತೆ ಹೇಳಿದರು.
ಅಲ್ಲದೆ ರಾಂಪೂರ ಕೆರೆಯಲ್ಲಿರುವ ನೀರು ಭೂ-ತೇವಾಂಶದ ಮೂಲಕ ಪೋಲಾಗುತ್ತಿದೆ ಇದರಿಂದ ಮತ್ತಷ್ಟು ನೀರಿನ ಸಮಸ್ಯೆಯಾಗುವ ಸಾದ್ಯತೆಯಿದ್ದು, ನೀರು ಪೋಲಾಗದಂತೆ ಅಗತ್ಯ ಕ್ರಮ, ನೀರಿನ ಕೆರೆ ಹಾಗೂ ಶುದ್ಧೀಕರಣಕ್ಕೆ ಭದ್ರತಾ ಸಿಬ್ಬಂದಿಗಳು ಜವಾಬ್ದಾರಿಯಿಂದ ನೋಡಿಕೊಂಡು ಕಲುಷಿತ ನೀರು ಸರಬರಾಜಾದರೆ ಸಿಬ್ಬಂದಿಗಳು ತಕ್ಷಣ ತಡೆಹಿಡಿದು ಸರಿಪಡಿಸುವಂತೆ ತಿಳಿಸಿದರು.
ನಗರದ ೩೫ ಬಡಾವಣೆಗಳಿಗೆ ಸರಬರಾಜಾಗುವ ನೀರಿನ ಪೈಪ್ಲೈನ್ ಪೈಪುಗಳು ಅಲ್ಲಲ್ಲಿ ಹೊಡೆದಿರುವುದರಿಂದ ಖನಿಜ ಮಿಶ್ರಿತ ನೀರು ಪೂರೈಕೆಯಾಗುತ್ತಿವೆ ಆದ್ದರಿಂದ ಸಮಗ್ರವಾಗಿ ಪೈಪಲೈನ್ ಪರಿಶೀಲನೆ ಮಾಡಿ ಅಗತ್ಯವಿದ್ದಲ್ಲಿ ದುರಸ್ತಿ ಮಾಡಬೇಕೆಂದು ನಗರಸಭೆ ಸದಸ್ಯರು ಆಯುಕ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಗುರುಲಿಂಗಪ್ಪ ಮಾತನಾಡಿ, ಪ್ರತಿದಿನ ನೀರು ತಪಾಸಣೆ ಮಾಡಲಾಗುತ್ತಿದೆ, ಅಲ್ಲಲ್ಲಿ ಕಲುಷಿತ ನೀರು ಸರಬರಾಜು ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರತಿದಿನ ನೀರು ತಪಾಸಣೆ ಮಾಡಿ ನೀರು ಸರಬರಾಜು ಮಾಡಲಾಗುವುದೆಂದು ತಿಳಿಸಿದರು.
ರಾಯಚೂರು ನಗರದ ಜನರಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಶೀಘ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಎಲ್ಲರು ನೀರನ್ನು ಪೋಲಾಗದಂತೆ ಮಿತವಾಗಿ ಬಳಸಬೇಕು ಎಂದು ರವಿ ಬೋಸರಾಜು ಅವರು ಜನರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಜಿಂದಪ್ಪ, ಸಾಜೀದ್ ಸಮೀರ್, ಬಿ ರಮೇಶ, ತಿಮ್ಮಾರಡ್ಡಿ, ವಾಹೀದ್, ಅಫ್ಜಲ್ ಅಲಿ ನಾಯಕ್, ಸಣ್ಣ ನರಸರಡ್ಡಿ, ಭೀಮಣ್ಣ, ಹರಿಬಾಬು ರಾಂಪೂರ, ತಿಮ್ಮಪ್ಪ ನಾಯಕ್, ಹಾಜಿ ಬಾಬ, ರಾಮು ಗಿಲೇರಿ, ರವಿ ರಾಂಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.