
ಬಳ್ಳಾರಿ,ಜು.06- ಶಾಶ್ವತವಾಗಿ ನೀರು ನಿಲ್ಲುವ ತಾಣಗಳಲ್ಲಿ ಸೊಳ್ಳೆ ಮರಿಗಳನ್ನು ಆಹಾರವಾಗಿ ಉಪಯೋಗಿಸುವ ಲಾರ್ವಹಾರಿ ಮೀನುಗಳಾದ ಗಾಂಬೋಷಿಯ ಮತ್ತು ಗಪ್ಪಿ ಮೀನುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ಪಡೆದುಕೊಂಡು ಸೊಳ್ಳೆಗಳ ನಿಯಂತ್ರಣ ಮತ್ತು ರೋಗ ತಡೆಗೆ ಸಾರ್ವಜನಿಕರು ಸಹಕರಿಸಬೇಕು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ತಿಳಿಸಿದರು.
ಬುಧವಾರದಂದು ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿ ಸೊಳ್ಳೆಗಳಿಂದ ಹರಡಬಹುದಾದ ರೋಗಗಳ ಕುರಿತು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ನೀಡುವ ವೇಳೆಯಲ್ಲಿ ಅವರು ಮಾತನಾಡಿದರು.
ಸೊಳ್ಳೆಯಿಂದ ಹರಡುವ ಕಾಯಿಲೆಗಳಾದ ಡೆಂಗ್ಯೂ, ಚಿಕನ್‍ಗುನ್ಯಾ, ಆನೆಕಾಲು, ಮಲೇರಿಯಾ ಮುಂತಾದ ರೋಗಗಳನ್ನು ನಿಲ್ರ್ಯಕ್ಷಿಸಿದರೆ ವ್ಯಕ್ತಿಯ ಗಂಭೀರ ಆರೋಗ್ಯ ಸಮಸ್ಯೆಗೆ ಉಂಟು ಮಾಡಬಹುದು.
ಸೊಳ್ಳೆ ನಿಯಂತ್ರಣಕ್ಕೆ ಮೀನುಗಳನ್ನು ಇಲಾಖೆಯ ಮೂಲಕ ಸಾಕಲಾಗುತ್ತಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಒದಗಿಸಲಾಗುವುದು. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಅವುಗಳನ್ನು ತೆಗೆದುಕೊಂಡು ಶಾಶ್ವತವಾಗಿ ನೀರು ನಿಲ್ಲುವ ಜಾಗಗಳಲ್ಲಿ ಬಿಡಬೇಕು ಎಂದು ಹೇಳಿದರು.
ಮುಂಜಾಗ್ರತಾ ಕ್ರಮವಾಗಿ ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು. ನೀರು ನಿಲ್ಲುವ ತಾಣಗಳನ್ನು ಮಣ್ಣು ಹಾಕಿ ಮುಚ್ಚಬೇಕು. ನೀರು ನಿಲ್ಲುವ ಟೈರ್, ಟಿನ್, ಪ್ಲಾಸ್ಟಿಕ್ ಕಫ್‍ಗಳನ್ನು ಸೂಕ್ತ ವಿಲೇವಾರಿ ಮಾಡಿ, ನೀರು ತುಂಬುವ ಡ್ರಮ್, ಬ್ಯಾರೆಲ್, ತೊಟ್ಟಿ ಮುಂತಾದವುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನೀರು ತುಂಬಿ ಸೊಳ್ಳೆಗಳು ನೀರಿನ ಮೇಲೆ ಕೂಡದ ಹಾಗೆ ಮುಚ್ಚಳ ಮುಚ್ಚಬೇಕು. ಇಲ್ಲವೆ ಬಟ್ಟೆಯನ್ನು ಕಟ್ಟುವ ಕ್ರಮವಹಿಸಬೇಕು ಎಂದು ತಿಳಿಸಿದರು.
ಮಲಗುವಾಗ ಸೊಳ್ಳೆ ಪರದೆಗಳ ಬಳಕೆ, ಯಾರಿಗಾದರೂ ಚಳಿಜ್ವರ, ಅತಿಯಾದ ತಲೆನೋವು, ಕಣ್ಣಿನ ಹಿಂಭಾಗ ಜಗ್ಗಿದಂತಾಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸುವ ಮೂಲಕ ರೋಗ ಖಚಿತ ಪಟ್ಟಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ಸುನೀಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವೆಂಕಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಮುಕ್ಕಣ್ಣ, ಸಿಬ್ಬಂದಿಗಳಾದ ರಾಜು, ಸುನಿತಾ, ನಾಗೇಶ್, ಅನಂತಲಕ್ಷ್ಮೀ ಹಾಗೂ ಗ್ರಾಮದ ಮುಖಂಡರಾದ ಹೊನ್ನೂರಪ್ಪ ಸೇರಿದಂತೆ ಇತರರು ಇದ್ದರು.