ಶಾವಿಗೆಯ ಸೋದರ ಸಂಬಂಧಿ ಗೌಲಿ !!

ಕಲಬುರಗಿ: ಬೇಸಿಗೆ ಬಂತೆಂದರೆ ಸಾಕು ಬಹಳ ಕಾಲ ಕೆಡದೇ ಇರುವ ಹಲವಾರು ಭಕ್ಷ್ಯಗಳನ್ನು ತಯಾರಿಸಲು ಇದು ಸಕಾಲ.
ಈಗ ಗೌಲಿ ವಿಷಯಕ್ಕೆ ಬರೋಣ. ಇದು ಶಾವಿಗೆಯ ಸೋದರ ಸಂಬಂಧಿ.ಗೌಲಿ ಎಂದರೆ ಗೋದಿಯ ಹಿಟ್ಟು ಅಥವಾ ರವೆಯನ್ನು ಕಲಸಿ ಹದ ಮಾಡಿಕೊಂಡು,ತುಂಬಾ ಚಾಕಚಕ್ಯತೆ ತಾಳ್ಮೆಯಿಂದ ಹೊಸೆದು ಮಾಡಿದ ಸಣ್ಣ ಸಣ್ಣ ಚೂರು ಮತ್ತು ಅದರಿಂದ ಮಾಡುವ ಪಾಯಸ
ಹೇಳಿದಷ್ಟು ಸುಲಭವಲ್ಲ ಗೌಲಿ ಹೊಸೆಯುವುದು. ಇದಕ್ಕೆ ಪರಿಣಿತಿ ಬೇಕು. ತರಬೇತಿ ಬೇಕು.ಎಲ್ಲಕ್ಕಿಂತ ಮುಖ್ಯವಾಗಿ ಬಹಳಷ್ಟು ಸಹನೆ ಬೇಕು. ಸಂಯಮಬೇಕು
ಎರಡು ಮೂರು ಚಮಚದಷ್ಟು ಕಲಸಿದ ಕಣಕದಿಂದ ಗೌಲಿ ಮಾಡಲು ಸುಮಾರು ಒಂದು ಗಂಟೆಗೂ ಮಿಕ್ಕಿ ಸಮಯ ಹಿಡಿಯುತ್ತದೆ. ಶ್ಯಾವಿಗೆ, ಮಂಡಿಗೆಗಳಂತೆ ಶ್ರಮ, ತಾಳ್ಮೆ ಎರಡನ್ನೂ ಬೇಡುವ ಗೌಲಿ ಪ್ರಚಾರಕ್ಕೆ ಬಾರದೇ ತೆರೆಮರೆಯಲ್ಲೇ ಉಳಿದು ಬಿಟ್ಟಿದೆ. ಆದರೂ ಇಂದಿಗೂ ಮಂಗಳಕಾರ್ಯಗಳಲ್ಲಿ ಮೊದಲ ಪ್ರಾಶಸ್ತ್ಯ ಮಾತ್ರ ಗೌಲಿಗೆ ಇರುವುದನ್ನು ಮರೆಯುವಂತಿಲ್ಲ. ಮನೆಯಲ್ಲಿ ಮದುವೆ,ಉಪನಯನಗಳಾದಾಗ ಮೊದಲು ಮದುವೆ ಹಿಂದಿನ ದಿನ ವರಪೂಜೆಯ ದಿನ ಇದೇ ಅಡುಗೆ ಮಾಡುತ್ತಾರೆ. ಆ ಸಮಯದಲ್ಲಿ ಹತ್ತಾರು ಖಾದ್ಯಗಳ ನಡುವೆ ಗೌಲಿ, ಪರಡಿ, ಸೌತೆ ಬೀಜಗಳಿಗೇ ಪ್ರಾಶಸ್ತ್ಯ. ಗೌಲಿ, ಪರಡಿ, ಉಗುರೊತ್ತು, ಚಿಗರೆಕೊಂಬು ಸೌತೆಬೀಜ ಈ ಐದು ವಿಧದ ಖಾದ್ಯ ಪದಾರ್ಥಗಳನ್ನು ಒಟ್ಟಾಗಿ ಐದು ದಿನಸಿನ ಕಾಳು ಎನ್ನುತ್ತಾರೆ.ದೀಪಾವಳಿಯ ಆರಂಭ ನೀರು ತುಂಬುವ ಹಬ್ಬದಂದು ಗಂಗಾಪೂಜೆ ಮಾಡಿ, ಗೌಲಿ ಪಾಯಸದ ನೈವೇದ್ಯ ಮಾಡುವುದು ನಮ್ಮಲ್ಲಿ ಸಂಪ್ರದಾಯ.