ಶಾಲೆ ಮೇಲ್ಛಾವಣೆ ಕುಸಿದು ವಿದ್ಯಾರ್ಥಿನಿಯರಿಗೆ ಗಾಯ: ವರುಣನ ಮುಂದುವರೆದ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಕಲಬುರಗಿ.ಆ.4: ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರೆದಿದ್ದು, ಗುರುವಾರ ಮಧ್ಯಾಹ್ನದ ವೇಳೆ ಸುರಿದ ಭಾರೀ ಮಳೆಗೆ ಇಡೀ ಜನಜೀವನ ಅಸ್ತವ್ಯಸ್ತವಾಗಿದೆ. ಬಹುತೇಕ ಜಲಾಶಯಗಳ ಹೊರ ಹರಿವು ಹೆಚ್ಚುತ್ತಿದ್ದು, ವಿವಿಧೆಡೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯ ಆಳಂದ್ ತಾಲ್ಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿನ ಶಾಲೆಯ ಮೇಲ್ಛಾವಣೆ ಕುಸಿತಗೊಂಡು ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡರು.
ಮಾದನ ಹಿಪ್ಪರಗಾ ಗ್ರಾಮದ ಕರ್ನಾಟಕ ಪಬ್ಲಿಕ್ ಕಾಲೇಜಿನಲ್ಲಿ ಅವಘಡ ಸಂಭವಿಸಿದೆ. ನಿಖಿತಾ ಎಂಬ ಪ್ರಥಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ತಲೆಗೆ ತೀವ್ರ ಪೆಟ್ಟಾಗಿ ರಕ್ತದ ಗಾಯಗಳಾಗಿವೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡವರನ್ನು ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ.
ಕಾಲೇಜಿನ ಕಟ್ಟಡ ಹಳೆಯದಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿಥಿಲಗೊಂಡು ಆವಾಂತರ ಸೃಷ್ಟಿಯಾಗಿದೆ. ಮೇಲ್ಛಾವಣೆ ಕುಸಿತ ತಕ್ಷಣ ಉಳಿದ ವಿದ್ಯಾರ್ತಿಗಳು, ಶಿಕ್ಷಕಿ ತರಗತಿ ಕೋಣೆಯಿಂದ ಹೊರಗೋಡಿ ಬಂದು ಸುರಕ್ಷಿತವಾದರು.
ರಸ್ತೆಗಳ ಮೇಲೆ ಪ್ರವಾಹ: ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ನಗರದಲ್ಲಿನ ವಾಹನ ಸವಾರರು ನರಕಯಾತನೆಯನ್ನು ಅನುಭವಿಸಿದರು. ಪ್ರತಿ ಮುಖ್ಯ ರಸ್ತೆಗಳ ಮೇಲೆ ಪ್ರವಾಹ ಹರಿಯಿತು. ಅಲ್ಲದೇ ರೈಲ್ವೆ ಒಳಸೇತುವೆಗಳ ಮಾರ್ಗದಲ್ಲಿ ಮೊಳಕಾಲುದ್ದ ನೀರು ಪ್ರವಾಹದಿಂದ ಹರಿದ ಪರಿಣಾಮ ವಾಹನ ಸವಾರರು ಸಂಚರಿಸಲು ಪರದಾಡಿದರು.
ನಗರದ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿನ ರೈಲ್ವೆ ಒಳಸೇತುವೆ, ಹಳೆಯ ಜೇವರ್ಗಿ ರಸ್ತೆಯಲ್ಲಿನ ರೈಲ್ವೆ ಒಳಸೇತುವೆ, ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಮುಂದಿರುವ ಲಾಲ್‍ಗೇರಿ ಕ್ರಾಸ್, ಕೆಬಿಎನ್ ಆಸ್ಪತ್ರೆ ಮುಂದಿನ ಮಾರ್ಗ, ವರ್ತುಲ ರಸ್ತೆಗಳು ಸೇರಿದಂತೆ ಪ್ರಮುಖ ರೈಲ್ವೆ ಒಳಸೇತುವೆಗಳ ಮಾರ್ಗಗಳಲ್ಲಿ ನೀರಿನ ಪ್ರವಾಹ ಹರಿದ ಪರಿಣಾಮ ಅನೇಕ ಆಟೋಗಳು ಬಂದ್ ಆದವು. ಕೊನೆಗೆ ಅವುಗಳನ್ನು ಒತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತಂದು ಬಿಡಲಾಯಿತು.
ದ್ವಿಚಕ್ರವಾಹನ ಸವಾರರು ಮೊಳಕಾಲುದ್ದ ಪ್ರವಾಹದಲ್ಲಿಯೇ ಸಂಚರಿಸಲು ತಿಣುಕಾಡಿದರು. ನಗರದ ಅನೇಕ ಮನೆಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ್ದು, ವ್ಯಾಪಾರ, ವಹಿವಾಟುಗಳು ಸ್ಥಗಿತಗೊಂಡವು. ಅನೇಕ ಮನೆಗಳಲ್ಲಿನ ಜನರು ನಿರಾಸ್ರಿತರಾಗಿದ್ದು, ಪರಿಹಾರ ಕಾರ್ಯಗಳಿಗಾಗಿ ಎದಿರು ನೋಡುತ್ತಿದ್ದಾರೆ.
ಪ್ರವಾಹ ಭೀತಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಮಳೆ ಅಬ್ಬರದಿಂದ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಬೆಳೆ ಹಾನಿಗೀಡಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಂದ್ರಂಪಳ್ಳಿ ಮತ್ತು ನಾಗರಾಳ್ ಜಲಾಶಯಗಳಿಂದ ನೀರು ನದಿಗೆ ಬಿಡಲಾಗುತ್ತಿದೆ. ಪರಿಣಾಮ ನದಿ, ನಾಲಾ, ಕರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ನಾಗರಾಳ್ ಜಲಾಶಯಕ್ಕೆ 1,100 ಕ್ಯೂಸೆಕ್ಸ್ ಒಳ ಹರಿವು ಹೆಚ್ಚಾಗಿದೆ. 1289 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗಿದೆ. ಅದೇ ರೀತಿ ಚಂದ್ರಂಪಳ್ಳಿ ಜಲಾಶಯಕ್ಕೆ 474 ಕ್ಯೂಸೆಕ್ಸ್ ಒಳಹರಿವು ಇದೆ. ಜಲಾಶಯದಿಂದ 874 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಆ ನದಿ ಪಾತ್ರಗಳ ಗ್ರಾಮಸ್ಥರು ಪ್ರವಾಹದ ಭೀತಿಗೆ ಒಳಗಾಗಿದ್ದಾರೆ. ಸಂಜೆಯೂ ಮಳೆ ಮುಂದುವರೆದಿದ್ದು, ಇಡೀ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ.